ಬೆಂಗಳೂರು: ಕರ್ನಾಟಕದ ರಾಜ್ಯ ಸರ್ಕಾರಿ ನೌಕರರಿಗೆ ಆಗಸ್ಟ್ 12 ಐತಿಹಾಸಿಕ ದಿನವಾಗುವ ಸಾಧ್ಯತೆ ಇದೆ. ರಾಜ್ಯ ಸರ್ಕಾರಿ ನೌಕರರ ಎರಡು ವರ್ಷಗಳ ಬೇಡಿಕೆಯಾದ ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಜಾರಿ ಕುರಿತಂತೆ ರಾಜ್ಯ ಸರ್ಕಾರ ಆಗಸ್ಟ್ 12ರಂದು ಮಹತ್ವದ ಸಭೆ ಕರೆದಿದೆ. ಹಾಗಾಗಿ, ಈಗ ಸರ್ಕಾರಿ ನೌಕರರ ಬೇಡಿಕೆ ಈಡೇರಿಸಲು ಕಾಲ ಸನ್ನಿಹಿತವಾಗಿದೆ ಎಂದೇ ಹೇಳಲಾಗುತ್ತಿದೆ.
ಈಗಿರುವ ಎನ್ ಪಿ ಎಸ್ ರದ್ದುಗೊಳಿಸಿ ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳಲ್ಲಿ ಒಂದಾಗಿರುವ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸುವುದು ಎಂದು ರಾಜ್ಯ ಸರ್ಕಾರ ಮಾತು ಕೊಟ್ಟಿದೆ. ಈ ವಿಚಾರದಲ್ಲಿ ಈಗಾಗಲೇ ಜಾರಿಗೊಳಿಸುವುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಘೋಷಿಸಿದ್ದರು. ಅದರ ಸಲುವಾಗಿ ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ಎನ್ನುವಂತೆ ಆಗಸ್ಟ್.12ರಂದು ಈ ಸಂಬಂಧ ಚರ್ಚಿಸಲು ಮಹತ್ವದ ಸಭೆ ಕರೆಯಲಾಗಿದೆ.
ಆಗಸ್ಟ್ 12 ರಂದು ಸಂಜೆ 4 ಗಂಟೆಗೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರು ಇವರ ಅಧ್ಯಕ್ಷತೆಯಲ್ಲಿ ಕೊಠಡಿ ಸಂಖ್ಯೆ: 306, 3ನೇ ಮಹಡಿ, ವಿಧಾನಸೌಧಲ್ಲಿ ಸಭೆ ನನಡೆಯಲಿದೆ. ರಾಜ್ಯದಲ್ಲಿ ಜಾರಿಯಲ್ಲಿರುವ ರಾಷ್ಟ್ರೀಯ ಪಿಂಚಣಿ ಯೋಜನೆಯ ಬದಲಾಗಿ ಹಳಯ ಪಿಂಚಣಿ ಯೋಜನೆಯನ್ನು ಜಾರಿ ಮಾಡುವ ಸಾಧ್ಯತೆಗಳ ಕುರಿತು ಚರ್ಚೆ ನಡೆಸಲು ಸಮಿತಿ ಸಭೆಯನ್ನು ಏರ್ಪಡಿಸಲಾಗಿದೆ. ಇದೇ ಸಭೆಯಲ್ಲಿ ಮಹತ್ವದ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಕಳೆದ ಚುನಾವಣೆಯಲ್ಲಿ ಸರ್ಕಾರಿ ನೌಕರರ ಬೇಡಿಕೆಯನ್ನು ಈಡೇರಿಸುವುದಾಗಿ ರಾಜ್ಯ ಕಾಂಗ್ರೆಸ್ ಭರವಸೆ ನೀಡಿತ್ತು. ಅದರಂತೆ ರಾಜ್ಯ ಸರ್ಕಾರ ಕೊಟ್ಟ ಮಾತಿನಂತೆ ನಾವು ನಡೆದುಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದರು. ಹಾಗಾಗಿ, ಈಗ ನೌಕರರ ಕುತೂಹಲ ಜಾಸ್ತಿಯಾಗಿದೆ.



















