ಬೆಂಗಳೂರು : ಇಂದು ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ಮಹತ್ವದ ಸಚಿವ ಸಂಪುಟ ಸಭೆ ನಡೆಯಲಿದೆ. ಬೆಳಿಗ್ಗೆ 11 ಘಂಟೆಗೆ ವಿಧಾನಸೌಧದ ಸಂಪುಟ ಸಭಾಂಗಣದಲ್ಲಿ ಈ ಸಭೆ ನಡೆಯಲಿದ್ದು, ಸಭೆಯಲ್ಲಿ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳುವ ಸಾಧ್ಯತೆಯಿದೆ.
ಏನೆಲ್ಲಾ ಚರ್ಚೆ?
- ವಿ.ಎಸ್. ಉಗ್ರಪ್ಪ ರವರ ಅಧ್ಯಕ್ಷತೆಯ ಮಹಿಳಾ ಮತ್ತು ಮಕ್ಕಳ ಮೇಲಿನ ಶೋಷಣೆ, ದೌರ್ಜನ್ಯ, ಅತ್ಯಾಚಾರ ಇತ್ಯಾದಿಗಳನ್ನು ನಿಯಂತ್ರಿಸುವ ಬಗ್ಗೆ ತಜ್ಞರ ಸಮಿತಿಯು ನೀಡಿರುವ ಅಂತಿಮ ವರದಿಯಲ್ಲಿನ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸುವ ಬಗ್ಗೆ ಚರ್ಚೆ.
- ಕರ್ನಾಟಕ ರಾಜ್ಯ ಪೊಲೀಸ್ ಸೇವೆಗಳು (ಪೊಲೀಸ್ ಕಾನ್ಸ್‌ಟೇಬಲ್ ಸಬ್-ಇನ್ಸ್‌ಪೆಕ್ಟರ್ | ಹಾಗೂ ಪೊಲೀಸ್ ಉಪಾಧೀಕ್ಷಕರುಗಳ ಹುದ್ದೆಗಳಿಗೆ ಪ್ರಶಂಸನೀಯ ಕ್ರೀಡಾಪಟುಗಳ ನೇರ ನೇಮಕಾತಿ) (ವಿಶೇಷ) (ತಿದ್ದುಪಡಿ) ನಿಯಮಗಳು, 2025”ಕ್ಕೆ ಅನುಮೋದನೆ ನೀಡುವ ಬಗ್ಗೆ ಸಮಾಲೋಚನೆ.
- ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ರಾಮನಗರ ಜಿಲ್ಲೆ, ರಾಮನಗರ ತಾಲ್ಲೂಕು, ಬಿಡದಿ ಹೋಬಳಿಯ ಬೈರಮಂಗಲ ಬನ್ನಿಗೆರೆ, ಹೊಸೂರು, ಕೆ.ಜಿ. ಗೊಲ್ಲರಪಾಳ್ಯ, ಕಂಚುಗಾರನಹಳ್ಳಿ, ಅರಳಾಳುಸಂದ್ರ, ಕೆಂಪಯ್ಯನಪಾಳ ಕಂಚುಗಾರನಹಳ್ಳಿ ಕಾವಲು, ಮಂಡಲಹಳ್ಳಿ ಹಾಗೂ ಹಾರೋಹಳ್ಳಿ ಹೋಬಳಿಯ ವಡೇರಹಳ್ಳಿ ಬಾಗಶಃ ಗ್ರಾಮ ಸೇರಿ ಒಟ್ಟು 10 ಗ್ರಾಮಗಳ ವ್ಯಾಪ್ತಿಯ ಪ್ರದೇಶದಲ್ಲಿ “ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ” ಯೋಜನೆಯನ್ನು ಅನುಷ್ಟಾನಗೊಳಿಸುವ ಬಗ್ಗೆ ಚರ್ಚೆ.
- ರಾಜ್ಯ ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ವಲಯದ ಉದ್ಯಮಗಳ ಕಾರ್ಯಕ್ಷಮತೆಯ ಬಲವರ್ಧನೆ ಮತ್ತು ರಾಜ್ಯದಲ್ಲಿ ನಿಷ್ಕ್ರಿಯವಾಗಿರುವ ಕೆಲವು ಸಾರ್ವಜನಿಕ ವಲಯ ಉದ್ಯಮಗಳ ಸಮಾಪನೆ/ಸಂಯೋಜನೆ ಅಥವಾ ವಿಲೀನದ ಬಗ್ಗೆ.
- ಸರ್ಕಾರದಿಂದ ನೇರವಾಗಿ/ ಪರೋಕ್ಷವಾಗಿ ನೇಮಕಗೊಂಡಿರುವ ವಿವಿಧ ಉದ್ಯೋಗಿಗಳಿಗೆ ಸಾಮಾಜಿಕ ಭದ್ರತಾ ವ್ಯವಸ್ಥೆಯನ್ನು ಜಾರಿಗೆ ತರುವ ಅಥವಾ ವಿಸ್ತರಿಸುವ ಬಗ್ಗೆ.
- ಪ್ರೀಮಿಯಂ ಎಫ್.ಎ.ಆರ್. ಸಂಬಂಧ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆಯ 1961ರ ಕಲಂ 18-ಬಿ ಗೆ ತಿದುಪಡಿ ತರುವ ಸಲುವಾಗಿ ಉಭಯ ಸದನಗಳಲ್ಲಿ ಅಂಗೀಕರಿಸಲಾಗಿದ್ದ “ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನೆ (ತಿದ್ದುಪಡಿ) ವಿಧೇಯಕ, 2024 ಹಿಂಪಡೆಯಲು ತೆಗೆದುಕೊಂಡ ಕ್ರಮಕ್ಕೆ ಘಟನೋತ್ತರ ಅನುಮೋದನೆ ನೀಡುವ ಬಗ್ಗೆ.
- ವೀರಪ್ಪನ್ ಕಾರ್ಯಾಚರಣೆಯ ಎಸ್.ಟಿ.ಎಫ್ ಕಾರ್ಯಪಡೆಯಲ್ಲಿ ಕರ್ತವ್ಯ ನಿರ್ವಹಿಸಿದ | ಪೊಲೀಸ್ ಸಿಬ್ಬಂದಿಗಳಿಗೆ ನೀಡಿದ ನಿವೇಶನ ಮಂಜೂರಾತಿ ಸೌಲಭ್ಯವನ್ನು ಅದೇ ಎಸ್.ಟಿ.ಎಫ್ ಕಾರ್ಯಪಡೆಯಲ್ಲಿ ಕರ್ತವ್ಯ ನಿರ್ವಹಿಸಿದ ಆರೋಗ್ಯ ಮತ್ತು ಕುಟುಂಬೆ ಕಲ್ಯಾಣ ಇಲಾಖೆಯ ಒಬ್ಬರು ನಿವೃತ್ತ ವೈದ್ಯಕೀಯ ಅಧಿಕಾರಿ ಮತ್ತು ಇಬ್ಬರು ನಿವೃತ್ತ ಶುಶೂಷಕರಿಗೂ ವಿಸ್ತರಿಸಿ ಚಾಮರಾಜನಗರ-ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರದ ಬಡಾವಣೆಯಲಿ ನಿವೇಶನ ಮಂಜೂರು ಮಾಡಲು ದಿನಾಂಕ: 30.10.2024 ಹೊರಡಿಸಲಾದ ಆದೇಶವನ್ನು ರದ್ದುಪಡಿಸಿ, ಮೈಸೂರು ನಗರಾಭಿವೃದ್ಧಿ ” ಪ್ರಾಧಿಕಾರದ ವ್ಯಾಪ್ತಿಯಲ್ಲಿ ಲಭ್ಯವಿರುವ ಹಂಚ್ಯಾ-ಸಾತಗಳ್ಳಿ ‘ಎ’ ವಲಯದಲ್ಲಿ ನಿವೇಶನಗಳನ್ನು ಮಂಜೂರು ಮಾಡುವ ಬಗ್ಗೆ.
- ರಾಜ್ಯದ ಎಲ್ಲಾ ಏತ ನೀರಾವರಿ ಕೆರೆಗಳ ವಿಲೇವಾರಿಗೆ ಸಂಬಂಧಿಸಿದಂತೆ ಸರ್ಕಾರಿ ಸವಾಲನ್ನು (Base Price) ಹಾಲಿ ಇರುವ ರೂ. 300/-ಗಳಿಂದ (ಉಪಯುಕ್ತತಾ ಜಲವಿಸ್ತೀರ್ಣಕ್ಕೆ) ರೂ. 1,500/-ಗಳಿಗೆ (ಪ್ರತಿ ಹೆಕ್ಟೇರ್‌ಗೆ) ಹೆಚ್ಚಿಸಲು ಹಾಗೂ ಸದರಿ ಕೆರೆಗಳನ್ನು ಇ-ಟೆಂಡರ್ ಮೂಲಕ ವಿಲೇವಾರಿ ಮಾಡಲು ಅನುಮತಿ ನೀಡುವ ಬಗ್ಗೆ.
- ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ 8.21 ಕಿ.ಮೀ. ಉದ್ದದ ಕರಾವಳಿ ಪ್ರದೇಶ, ಸಮುದ್ರದ ಕಡೆಗೆ 6 ಕಿ.ಮೀ. ವರೆಗಿನ ಪ್ರದೇಶ ಹಾಗೂ 835.02 ಹೆಕ್ಟೇರ್ ಅರಣ್ಯ ಪ್ರದೇಶವನ್ನು ಒಳಗೊಂಡಂತೆ, ಒಟ್ಟು 5959.322 ಹೆಕ್ಟೇರ್ ಪ್ರದೇಶವನ್ನು “ಅಪ್ಸರಕೊಂಡ-ಮುಗಲಿ ಕಡಲ ವನ್ಯಜೀವಿಧಾಮ” ಎಂದು ಘೋಷಿಸುವ ಬಗ್ಗೆ.
- ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ 19 ಮೊರಾರ್ಜಿ ದೇಸಾಯಿ ವಸತಿ ಶಾಲೆ/ ಕಾಲೇಜುಗಳ ಕಟ್ಟಡಗಳನ್ನು ರೂ. 304.00 ಕೋಟಿಗಳ ಅಂದಾಜು ಮೊತ್ತದಲ್ಲಿ ಹಾಗೂ ಪ್ರಧಾನಮಂತ್ರಿ ಜನ ವಿಕಾಸ ಕಾರ್ಯಕ್ರಮ (PMJVK) ಯೋಜನೆಯಡಿ 12 ವಸತಿ ಶಾಲೆ/ವಿದ್ಯಾರ್ಥಿ ನಿಲಯಗಳನ್ನು ರೂ. 191.19 ಕೋಟಿಗಳ ಅಂದಾಜು ಮೊತ್ತದಲ್ಲಿ ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ
- ತುಮಕೂರು ಜಿಲ್ಲೆಯ ಮಧುಗಿರಿ ಪುರಸಭೆ 2/3 ವ್ಯಾಪ್ತಿಗೆ ಕೆಲವು ಸರ್ವೆ ನಂಬರುಗಳ ಪ್ರದೇಶಗಳನ್ನು ಸೇರ್ಪಡೆಗೊಳಿಸುವ ಬಗ್ಗೆ.
- ಬೀದರ್ ನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸಲು | ದಿನಾಂಕ: 17.09.2024ರ ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸಲಾಗಿದ್ದು, ಪ್ರಸ್ತುತ ಕೆಲವು ಗ್ರಾಮಗಳನ್ನು ಕೈಬಿಡುವ/ ಸೇರಿಸುವ ಪರಿಷ್ಕೃತ ನೀಡುವ ಬಗ್ಗೆ.
- 2023-24ನೇ ಸಾಲಿನ ವಿಶೇಷ ಅನುದಾನದಡಿ ಬೆಳಗಾವಿ ಜಿಲ್ಲೆಯ ಅಥಣಿ ಪುರಸಭೆಯ ಮಾಲ್ಕಿಯ ಜೋಡು ಕೆರೆ ಅಭಿವೃದ್ಧಿಗೊಳಿಸುವ (ಹಂತ-1) ರೂ. 15.00 ಕೋಟಿಗಳ ಅಂದಾಜು ಮೊತ್ತದ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.
- ಸರ್ಕಾರದ ಹಲವು ಇಲಾಖೆಗಳಲ್ಲಿನ ಸಿವಿಲ್ ಕಾಮಗಾರಿಗಳ ಅಂದಾಜುಗಳು ಹಲವಾರು ಅಧಿಕ ಹೆಚ್ಚುವರಿಗಳಿಂದ ಪರಿಷ್ಕೃತಗೊಳ್ಳುತ್ತಿರುವ ಕುರಿತು ಅಧ್ಯಯನಕ್ಕಾಗಿ ಬಿ. ಗುರುಪ್ರಸಾದ್, ನಿವೃತ್ತ ಪ್ರಧಾನ ಅಭಿಯಂತರರು ಇವರ ಅಧ್ಯಕ್ಷತೆಯಲ್ಲಿ ರಚಿಸಲಾದ “ಕಾಮಗಾರಿ ಅಂದಾಜುಗಳ ತಯಾರಿಕಾ ಅಧ್ಯಯನ ಸಮಿತಿ”ಯು ಮಾಡಿರುವ ಶಿಫಾರಸ್ಸುಗಳನ್ನು ಜಾರಿಗೊಳಿಸುವ ಬಗ್ಗೆ.
- “ಮೂಲಸೌಲಭ್ಯ ವಲಯದ ಯೋಜನೆಗಳ ನೀತಿ, 2025”ಕ್ಕೆ ಅನುಮೋದನೆ ನೀಡುವ ಬಗ್ಗೆ.
- ರಾಜ್ಯದ ಚಿಕ್ಕ ಬಂದರುಗಳಲ್ಲಿ ವಿಧಿಸಲಾಗುತ್ತಿರುವ ಬಂದರು ಶುಲ್ಕ, ಪೈಲಟೇಜ್ ಮತ್ತು ಟಗ್ ಬಾಡಿಗೆ ಶುಲ್ಕಗಳ ಪರಿಷ್ಕರಣೆ ಹಾಗೂ ಹಾರ್ಬರ್ ಕ್ರಾಪ್ಟ್ ಸರ್ವೆ ಮತ್ತು ನೋಂದಣಿ ಶುಲ್ಕ ಹಾಗೂ ಇನ್‌ಲ್ಯಾಂಡ್ ವೆಸೆಲ್ಸ್ ನಾವೆಗಳ ಸರ್ವೆ ಮತ್ತು ನೋಂದಣಿ ಶುಲ್ಕಗಳ ಪರಿಷ್ಕರಣೆಗೆ ಅನುಮೋದನೆ ನೀಡುವ ಬಗ್ಗೆ.
- ಹಾಸನ-ಹೊಳೆನರಸೀಪುರ ರೈಲು ಮಾರ್ಗದ ನಡುವಿನ ಕಿ.ಮೀ. 1/600-700ರಲ್ಲಿ ಬರುವ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ಸಂಖ್ಯೆ: 3ರ ಬದಲಿಗೆ ರಸ್ತೆ ಮೇಲ್ಸ್ತುವೆ ಹಾಗೂ ಕೂಡು ರಸ್ತೆ ನಿರ್ಮಾಣ ಕಾಮಗಾರಿಯನ್ನು ರೂ. 83.72 ಕೋಟಿಗಳ ಪರಿಷ್ಕೃತ ಅಂದಾಜು ವೆಚ್ಚದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.
- ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕು ರಾಜ್ಯ ಹೆದ್ದಾರಿ-24 ರಿಂದ ಅಕ್ಷಯ್ ಫುಡ್ ಪಾರ್ಕ್ ಸಂಪರ್ಕಿಸಲು 4 ಪಥಗಳ ರಸ್ತೆ ನಿರ್ಮಾಣ ಕಾಮಗಾರಿಯನ್ನು ರೂ. 20.00 ಕೋಟಿಗಳ ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.
- ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಕಡಣಿ ಗ್ರಾಮದ ಹತ್ತಿರ ಭೀಮಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಕಾಮಗಾರಿಯನ್ನು ರೂ. 44.50 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.
- 2024-25ನೇ ಸಾಲಿನಲ್ಲಿ ಕರ್ನಾಟಕ ರಾಜ್ಯಕ್ಕೆ ಪಿ.ಎಂ-ಜನ್ ಮನ್ ಯೋಜನೆ ಬ್ಯಾಚ್-2ರಡಿ | ರೂ. 39.25 ಕೋಟಿಗಳ ಅಂದಾಜು ವೆಚ್ಚದಲ್ಲಿ 22 (39.99 ಕಿ.ಮೀ.ಗಳು) ಕಾಮಗಾರಿಗಳನ್ನು ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಕೆ.ಆರ್.ಆರ್.ಡಿ.ಎ ಮೂಲಕ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.
- ಹೊಂಬೆಳಕು” ಯೋಜನೆಯಡಿ 50 ಗ್ರಾಮ ಪಂಚಾಯತಿಗಳಲ್ಲಿ ಸೋಲಾರ್ ಬೀದಿ ದೀಪಗಳನ್ನು ರೂ. 25.00 ಕೋಟಿಗಳ ವೆಚ್ಚದಲ್ಲಿ ಅಳವಡಿಸುವ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.
- ಭಜಂತ್ರಿ (ವಜಾಗೊಂಡ ಶಿಕ್ಷಣಾಧಿಕಾರಿ ಮತ್ತು ತತ್ಸಮಾನ ವೃಂದದ ಅಧಿಕಾರಿ) ಹಿಂದಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಅಥಣಿ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಇವರ ಮೇಲಿನ ಟ್ರ್ಯಾಪ್ ಪ್ರಕರಣದಲ್ಲಿ ಮಾನ್ಯ ಕರ್ನಾಟಕ ಆಡಳಿತ ನ್ಯಾಯಮಂಡಳಿ, ಬೆಳಗಾವಿ ಪೀಠ ಮತ್ತು ಮಾನ್ಯ ಉಚ್ಚ ನ್ಯಾಯಾಲಯ, ಧಾರವಾಡ ಪೀಠ ನೀಡಿರುವ ತೀರ್ಪು/ ಆದೇಶದ ಹಿನ್ನೆಲೆಯಲ್ಲಿ ಇವರನ್ನು ಸೇವೆಯಿಂದ ವಜಾಗೊಳಿಸಿರುವ ದಂಡನಾ ಆದೇಶವನ್ನು ಹಿಂಪಡೆಯುವ ಬಗ್ಗೆ ಚರ್ಚೆ.
ಹೀಗೆ ಹಲವು ವಿಚಾರಗಳ ಬಗ್ಗೆ ಇಂದಿನ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ, ಅನುಮೋದನೆ ನೀಡಲಾಗುವುದು ಎಂಬ ಮಾಹಿತಿ ಕರ್ನಾಟಕ ನ್ಯೂಸ್ ಬೀಟ್ ಗೆ ಗೊತ್ತಾಗಿದೆ.