ಬೆಂಗಳೂರು: ಬ್ಯಾಲೆಟ್ ಪೇಪರ್ ಜಾರಿಗೆ ತರುತ್ತಿರುವುದು ಮೂರ್ಖತನದ ಪರಮಾವಧಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಗೆ ಈಗ ಬ್ಯಾಲೆಟ್ ಪೇಪರ್ ನೆನಪಾಗಿದೆ. ಇವಿಎಂ ಮೇಲೆ ವಿಶ್ವಾಸ ಕಡಿಮೆಯಾಗಿದ್ದು ಯಾಕೆ ಎಂದು ಸಿಎಂ, ಡಿಸಿಎಂ ಹೇಳಬೇಕು ಎಂದು ಪ್ರಶ್ನಿಸಿದ್ದಾರೆ.
ಮೂರು ಚುನಾವಣೆಗಳಲ್ಲಿ ಜನರು ಕಾಂಗ್ರೆಸ್ ನ್ನು ತಿರಸ್ಕರಿಸಿದ್ದಾರೆ. ಇದನ್ನು ಮುಚ್ಚಿಕೊಳ್ಳಲು ಇವಿಎಂ ಸರಿ ಇಲ್ಲ ಎಂದು ಹೇಳುತ್ತಿದ್ದಾರೆ. ನಾವು ಬ್ಯಾಲೆಟ್ ಪೇಪರ್ ಗೆ ಹೆದರುತ್ತಿಲ್ಲ. ಅದರ ಅವಶ್ಯಕತೆಯೂ ನಮಗೆ ಇಲ್ಲ. ಇವಿಎಂಗಳಲ್ಲಿ ದೋಷ ಇದ್ದಿದ್ದರೆ ಹಿಮಾಚಲ ಪ್ರದೇಶ, ತೆಲಂಗಾಣ, ಕರ್ನಾಟಕಗಳಲ್ಲಿ ಕಾಂಗ್ರೆಸ್ ಹೇಗೆ ಅಧಿಕಾರಕ್ಕೆ ಬಂತು? ಎಂದು ಪ್ರಶ್ನಿಸಿದ್ದಾರೆ.
ಮಹಾರಾಷ್ಟ್ರ, ಹರಿಯಾಣಗಳಲ್ಲಿ ಸೋತಿರುವ ಕಾಂಗ್ರೆಸ್ ಹತಾಶೆಯಿಂದ ಬ್ಯಾಲೆಟ್ ಪೇಪರ್ ಜಾರಿಗೆ ತರುತ್ತಿದೆ. ಕಾಂಗ್ರೆಸ್ ಎಲ್ಲವನ್ನೂ ವಿರೋಧ ಮಾಡುತ್ತಿದೆ. ಬ್ಯಾಲೆಟ್ ಪೇಪರ್ ವಿರುದ್ಧ ಬಿಜೆಪಿಯಿಂದ ಹೋರಾಟ ಕೈಗೆತ್ತಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಬಾನು ಮುಷ್ತಾಕ್ ಆಯ್ಕೆ ವಿರುದ್ಧ ಪ್ರತಾಪ್ ಸಿಂಹ ಹೈಕೋರ್ಟ್ ಮೊರೆ ಹೋಗಿರುವ ವಿಚಾರವಾಗಿ ಮಾತನಾಡಿದ ವರು, ಪ್ರತಾಪ್ ಸಿಂಹ ಹೈಕೋರ್ಟ್‌ಗೆ ಹೋಗಿರುವ ಬಗ್ಗೆ ಮಾಹಿತಿ ಇಲ್ಲ. ನಾನೂ ಮಾಧ್ಯಮಗಳಲ್ಲಿ ನೋಡಿದ್ದು. ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿದ್ದಾರೆ. ಹಿಂದೂ ಮಹಿಳೆ ದೀಪಾ ಬಸ್ತಿ ಅವರನ್ನು ಯಾಕೆ ಕರೆಯಲಿಲ್ಲ? ಇದಕ್ಕೆ ಸಿದ್ದರಾಮಯ್ಯ ಅವರು ಇನ್ನೂ ಉತ್ತರ ಕೊಟ್ಟಿಲ್ಲ. ಮೊದಲು ಇದಕ್ಕೆ ಸಿದ್ದರಾಮಯ್ಯ ಸ್ಪಷ್ಟನೆ ಕೊಡಲಿ ಎಂದು ಆಗ್ರಹಿಸಿದ್ದಾರೆ.