ಡೆಹ್ರಾಡೂನ್: ಉತ್ತರಾಖಂಡದಲ್ಲಿ ಇಂದಿನಿಂದ(ಸೋಮವಾರ) ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಯಾಗಿದ್ದು, ಈ ಕಾಯ್ದೆ ಅನುಷ್ಠಾನಗೈದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಮದುವೆ ಮತ್ತು ವಿಚ್ಛೇದನ, ಉತ್ತರಾಧಿಕಾರ, ಸಹ-ಜೀವನ ಮತ್ತಿತರ ವಿಷಯಗಳು ಇನ್ನು ಮುಂದೆ ಈ ಕಾಯ್ದೆಯ ವ್ಯಾಪ್ತಿಯಲ್ಲಿರಲಿದೆ. ಇದು ಎಲ್ಲ ಧರ್ಮಗಳ ಪುರುಷರು ಮತ್ತು ಮಹಿಳೆಯರ ವಿವಾಹದ ವಯೋಮಿತಿಯಲ್ಲಿ ಸಮಾನತೆ, ವಿಚ್ಛೇದನ ಪ್ರಕ್ರಿಯೆಗಳಲ್ಲಿ ಸಮಾನತೆಯನ್ನು ತರಲಿದ್ದು, ಈ ಕಾಯ್ದೆಯಡಿ ಬಹುಪತ್ನಿತ್ವ ಮತ್ತು ಹಲಾಲಾಗೆ ನಿಷೇಧವಿದೆ. ಯುಸಿಸಿ ಅನುಷ್ಠಾನದಿಂದ ಜಾತಿ, ಧರ್ಮ, ಲಿಂಗ ಇತ್ಯಾದಿಗಳ ಆಧಾರದ ಮೇಲೆ ತಾರತಮ್ಯ ಮಾಡುವ ವೈಯಕ್ತಿಕ ನಾಗರಿಕ ವಿಷಯಗಳಿಗೆ ಸಂಬಂಧಿಸಿದ ಎಲ್ಲ ಕಾನೂನುಗಳಲ್ಲಿ ಏಕರೂಪಕ್ಕೆ ತಂದಂತಾಗಿದೆ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದಾರೆ.
ಕಾಯ್ದೆಯ ನಿಯಮಗಳ ಅನುಮೋದನೆ ಮತ್ತು ಸಂಬಂಧಪಟ್ಟ ಅಧಿಕಾರಿಗಳ ತರಬೇತಿ ಸೇರಿದಂತೆ ಯುಸಿಸಿ ಜಾರಿಗೆ ಅಗತ್ಯವಾದ ಎಲ್ಲ ಸಿದ್ಧತೆಗಳನ್ನು ಸರ್ಕಾರ ಪೂರ್ಣಗೊಳಿಸಿದೆ ಎಂದೂ ಅವರು ತಿಳಿಸಿದ್ದಾರೆ. 2022ರ ಉತ್ತರಾಖಂಡ ವಿಧಾನಸಭೆ ಚುನಾವಣೆ ಸಂದರ್ಭದಲ್ಲೇ ಧಾಮಿ ಅವರು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೇರಿದರೆ ಯುಸಿಸಿ ಜಾರಿ ಮಾಡುವುದಾಗಿ ಆಶ್ವಾಸನೆ ನೀಡಿದ್ದರು. ಅದರಂತೆ, ಈಗ ಕಾಯ್ದೆಯನ್ನು ಅನುಷ್ಠಾನಗೈಯ್ಯಲಾಗಿದೆ.
‘ನಾಗರಿಕ ಬಂಧುಗಳೇ, 2025ರ ಜನವರಿ 27ರಿಂದ ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ಬರಲಿದೆ. ಈ ಕಾನೂನು ಜಾರಿಗೆ ತರುತ್ತಿರುವ ಸ್ವತಂತ್ರ ಭಾರತದ ಮೊದಲ ರಾಜ್ಯ ನಮ್ಮದು. ಯುಸಿಸಿ ಕಾರ್ಯಗತಗೊಳಿಸಲು ಎಲ್ಲ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದೇವೆ. ಕಾಯ್ದೆಯ ನಿಯಮಗಳ ಅನುಮೋದನೆ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ತರಬೇತಿ ಪೂರ್ಣಗೊಳಿಸಲಾಗಿದೆ.
ಈ ಕಾಯ್ದೆಯು ಸಮಾಜದಲ್ಲಿ ಏಕರೂಪತೆಯನ್ನು ತರುತ್ತದೆ, ಸಮಾನ ಹಕ್ಕುಗಳನ್ನು ಖಚಿತಪಡಿಸುತ್ತದೆ. ಏಕರೂಪ ನಾಗರಿಕ ಸಂಹಿತೆಯ ಅಡಿಯಲ್ಲಿ ದೇಶವನ್ನು ಅಭಿವೃದ್ಧಿ ಹೊಂದಿದ, ಸಂಘಟಿತ, ಸಾಮರಸ್ಯ ಮತ್ತು ಸ್ವಾವಲಂಬಿ ರಾಷ್ಟ್ರವನ್ನಾಗಿ ಮಾಡುವ ಪ್ರಧಾನಿ ಮೋದಿಯವರ ಶ್ರಮಕ್ಕೆ ಇದು ನಾವು ನೀಡುತ್ತಿರುವ ಕೊಡುಗೆಯಾಗಿದೆ’ ಎಂದು ಧಾಮಿ ಟ್ವೀಟ್ ಮಾಡಿದ್ದಾರೆ.