ಬೆಂಗಳೂರು : ಯಲಹಂಕ ಬಳಿಯ ಕೋಗಿಲು ಲೇಔಟ್‌ನ ಸರಕಾರಿ ಭೂಮಿಯಲ್ಲಿ ಅಕ್ರಮವಾಗಿ ತಲೆಯೆತ್ತಿದ್ದ ಶೆಡ್‌ಗಳ ತೆರವು ಕಾರ್ಯಾಚರಣೆಯು ರಾಜಕೀಯ ಸ್ವರೂಪ ಪಡೆದುಕೊಂಡು ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಾನವೀಯತೆ ನೆಲೆಯಲ್ಲಿ ಅರ್ಹ ಸಂತ್ರಸ್ತರಿಗೆ ಸುಸಜ್ಜಿತ ವಸತಿ ಸೌಲಭ್ಯ ಕಲ್ಪಿಸಲು ತೀರ್ಮಾನಿಸಿದೆ.
ಈ ಬೆನ್ನಲ್ಲೇ ಇದೀಗ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಅವರು ಕೋಗಿಲು ಬಡಾವಣೆಯ ನಿವಾಸಿಗಳಿಗೆ ಶೀಘ್ರವೇ ಮೂಲಭೂತ ಸೌಕರ್ಯಗಳೊಂದಿಗೆ ತಾತ್ಕಾಲಿಕ ಪುನರ್‌ವಸತಿ ಕಲ್ಪಿಸಿಕೊಡುವಂತೆ ಕೋರಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದಿದ್ದಾರೆ.
ಪತ್ರದಲ್ಲೇನಿದೆ?
ಬೆಂಗಳೂರಿನ ಯಲಹಂಕ ಸಮೀಪವಿರುವ ಕೋಗಿಲು ಬಡಾವಣೆಯ 5 ಎಕರೆ ಜಾಗದಲ್ಲಿದ್ದ ಮನೆ/ಶೆಡ್ ಗಳನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಕಂಪನಿ ನಿಯಮಿತ ವತಿಯಿಂದ, ತೆರವುಗೊಳಿಸಿದ್ದು, ಅಲ್ಲಿ ವಾಸವಿದ್ದ ಸುಮಾರು 200 ಕುಟುಂಬಗಳ ಮಹಿಳೆಯರು, ಅಂಗವಿಕಲರು, ಮಕ್ಕಳು ಮತ್ತು ವೃದ್ಧರು ಬೀದಿಗೆ ಬಿದ್ದಿರುತ್ತಾರೆ.

ಬೆಂಗಳೂರಿನಲ್ಲಿ ಅತ್ಯಧಿಕ ಚಳಿಯಿದ್ದು, ಮಹಿಳೆಯರು, ಅಂಗವಿಕಲರು, ವೃದ್ಧರು ಮತ್ತು ಮಕ್ಕಳು ಮನೆ/ಶೆಡ್ ಇಲ್ಲದೆ ಚಳಿಯಲ್ಲಿ ನಲುಗುತ್ತಿದ್ದು, ಶುದ್ಧ ಕುಡಿಯುವ ನೀರು, ಆಹಾರ ಹಾಗೂ ಶೌಚಾಲಯಗಳು ಸೇರಿದಂತೆ ಮೂಲಭೂತ ಸೌಕರ್ಯಗಳು ಹಾಗೂ ಮಹಿಳೆಯರಿಗೆ ಮಕ್ಕಳಿಗೆ ಯಾವುದೇ ಸುರಕ್ಷತೆ ಇಲ್ಲದೆ ಕಂಗಾಲಾಗಿರುತ್ತಾರೆ.
ಹಾಗಾಗಿ ಈ ಕುಟುಂಬಗಳಿಗೆ ಕೂಡಲೇ ತಾತ್ಕಾಲಿಕ ಪುನರ್‌ವಸತಿ ಕಲ್ಪಿಸಿಕೊಟ್ಟು, ಮುಂದಿನ ದಿನಗಳಲ್ಲಿ ಈ ಅಸಹಾಯಕ ಮಹಿಳೆಯರು, ಮಕ್ಕಳು, ಅಂಗವಿಕಲರು ಹಾಗೂ ವೃದ್ಧರು ನೆಮ್ಮದಿಯ ಜೀವನವನ್ನು ನಡೆಸಲು, ಮೂಲಭೂತ ಸೌಕರ್ಯಗಳೊಂದಿಗೆ ಶಾಶ್ವತ ವಸತಿ ವ್ಯವಸ್ಥೆಯನ್ನು ಕಲ್ಪಿಸಿಕೊಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಅವರು ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಬೈಕಿಗೆ ಅಡ್ಡಬಂದ ನಾಯಿಯನ್ನು ತಪ್ಪಿಸಲು ಹೋಗಿ ಅಪಘಾತ | ASI ಸಾವು!



















