ಯಾದಗಿರಿ: ಯಾದಗಿರಿ ಜಿಲ್ಲೆಯ ಗುರುಮಠಕಲ್ ಪಟ್ಟಣದ ರೈಸ್ ಮಿಲ್‌ನಲ್ಲಿ ಸಂಗ್ರಹಿಸಲಾಗಿದ್ದ ಅಕ್ರಮ ಪಡಿತರ ಅಕ್ಕಿ ಜಪ್ತಿ ಮಾಡಿದ ಹಿನ್ನೆಲೆಯಲ್ಲಿ ನಿನ್ನೆ(ಸೋಮವಾರ) ರಾತ್ರಿ ಇಬ್ಬರ ಮೇಲೆ ಪ್ರಕರಣ ದಾಖಲಾಗಿದ್ದು, ಒಟ್ಟು 1,17,92 ಕೋಟಿ ರೂ.ಮೌಲ್ಯದ (ಒಂದು ಕೋಟಿ ಹದಿನೇಳು ಲಕ್ಷ ತೊಂಬತ್ತೆರಡು ಸಾವಿರ) ಸುಮಾರು 4108 ಕ್ವಿಂಟಾಲ್ ಅಕ್ಕಿ ಜಪ್ತಿ ಮಾಡಿದ ಘಟನೆ ನಡೆದಿದೆ.
ಲಕ್ಷ್ಮಿ ವೆಂಕಟೇಶ್ವರ ಇಂಡ್ರಸ್ಟ್ರೀಸ್ ನ ಮಾಲಿಕ ನರೆಂದ್ರ ರಾಠೋಡ್ ಮತ್ತು ಅಯ್ಯಪ್ಪ ರಾಠೋಡ್ ಎನ್ನುವವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಈ ಇಬ್ಬರು ಒಳಗೊಂಡಂತೆ ಮಹಾಲಕ್ಷ್ಮಿ, ಬಾಲಾಜಿ ಇಂಡ್ರಸ್ಟ್ರೀಸ್ ನ ಪ್ರಮುಖರು ಪರಾರಿಯಾಗಿದ್ದಾರೆ.
ಆಹಾರ ಇಲಾಖೆ ಅಧಿಕಾರಿಗಳು ಶನಿವಾರ ರಾತ್ರಿ ಆರೋಪಿ ನರೇಂದ್ರ ರಾಠೋಡ್ ಅವರಿಗೆ ಒಳಪಟ್ಟಿರುವ ಗುರುಮಠಕಲ್ ಪಟ್ಟಣದ ವಿವಿಧ ರೈಸ್ ಮಿಲ್, ಗೊದಾಮುಗಳ ಮೇಲೆ ದಾಳಿ ಇಟ್ಟು ಕಾರ್ಯಾಚರಣೆ ನಡೆಸಿದ್ದರು, ಕಾರ್ಯಚರಣೆ ಸೋಮವಾರ ಸಂಜೆ 6.30 ರವರೆಗೆ ನಡೆದಿದ್ದು, ಅಂತಿಮವಾಗಿ ಭಾರಿ ಪ್ರಮಾಣದ ಪಡಿತರ ಅಕ್ಕಿ ಜಪ್ತಿ ಮಾಡುವ ಮೂಲಕ ದೊಡ್ಡ ಪ್ರಕರಣವನ್ನೇ ಬಯಲಿಗೆಳೆದಿದ್ದಾರೆ.