ದಾವಣಗೆರೆ: ವೈದ್ಯರ ಸೂಚನೆ, ಶಿಫಾರಸು ಹಾಗೂ ಪರವಾನಗಿ ಯಾವುದೂ ಇಲ್ಲದೆ ಅಕ್ರಮವಾಗಿ ಔಷಧ ಮಾರಾಟ ಮಾಡುತ್ತಿದ್ದ ಜಾಲವನ್ನು ಪೊಲೀಸರು ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸಿದ್ದಾರೆ.
ದಾವಣಗೆರೆಯ ಎಸ್ಪಿಎಸ್ ನಗರದ ಅಂಗಡಿ ಕೆಲಸಗಾರ ಶಿವಕುಮಾರ (38), ಅಂಗಡಿ ಮಾಲೀಕ ಮೆಹಬೂಬ್ ನಗರದ ಅಜಿಮುದ್ದೀನ್ (37), ದೇವರಾಜ ಅರಸ್ ಬಡಾವಣೆಯ ಎ ಬ್ಲಾಕ್ ನ ರಿಯಲ್ ಎಸ್ಟೇಟ್ ಕೆಲಸ ಮಾಡುತ್ತಿದ್ದ ಮಹಮದ್ ಶಾರೀಕ್ (35), ಚನ್ನಗಿರಿ ತಾಲೂಕಿನ ಹೊನ್ನೆಬಾಗಿಯ ಅಡಿಕೆ ವ್ಯಾಪಾರ ಮಂಡಲ ಹತ್ತಿರದ ಸೈಯದ್ ಬಾಬು ಅಲಿಯಾಸ್ ಯೂನೂಸ್, ಚನ್ನಗಿರಿಯ ಸೈದಾಮೊಹಲ್ಲಾದ ಆಟೋ ಚಾಲಕ ಅಬ್ದುಲ್ ಗಫರ್ ಅಲಿಯಾಸ್ ಆಟೋಬಾಬು (48) ಬಂಧಿತ ಆರೋಪಿಗಳು.
ಮಾದಕ ದ್ರವ್ಯ ನಿಗ್ರಹ ಪಡೆಯ ವಿಶೇಷ ಕರ್ತವ್ಯ ಅಧಿಕಾರಿ ಪಿ.ಎಸ್.ಐ. ಸಾಗರ್ ಅತ್ತರವಾಲ್ ಹಾಗೂ ಸಿಬ್ಬಂದಿಯನ್ನೊಳಗೊಂಡ ತಂಡ ಖಚಿತ ಮಾಹಿತಿ ಮೇರೆಗೆ ಬಸವನಗರ ಠಾಣಾ ವ್ಯಾಪ್ತಿಯ ದೇವರಾಜ ಅರಸ್ ಬಡಾವಣೆ ಫ್ಲೈಓವರ್ ಪಕ್ಕದ ಸರ್ವೀಸ್ ರಸ್ತೆಯಲ್ಲಿ ಐವರು ಆರೋಪಿಗಳನ್ನು ಬಂಧಿಸಲಾಗಿದೆ.
ಇವರಿಂದ 100 ಎಂ.ಎಲ್ನ ಒಟ್ಟು 340 Broncof-C cough Syrup ಬಾಟಲ್‌ಗಳು, 100 ಎಂ.ಎಲ್ನ 15 EDEX-CT cough Syrup ಬಾಟಲ್‌ಗಳು, 20 ಸಣ್ಣ ಬಾಕ್ಸ್ಗಳಲ್ಲಿರುವ aceclofenac Paracetamol & serratiopeptidase tablets, ಒಂದು ಹೊಂಡಾ ಆಕ್ಟಿವಾ ಬೈಕ್, 1,200 ರೂ., ನಗದು ಸೇರಿ ಒಟ್ಟು 1,25,504 ರೂ. ಮೌಲ್ಯದ ಔಷಧಗಳನ್ನು ವಶಕ್ಕೆ ಪಡೆಯಲಾಗಿದೆ.
ಈ ಕುರಿತು ಬಸವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.