ಬೆಂಗಳೂರು: ದೇಶದ ಅಗ್ರ ಮ್ಯಾನೇಜ್ ಮೆಂಟ್ ಶಿಕ್ಷಣ ಸಂಸ್ಥೆಗಳಲ್ಲಿ ಎಂಬಿಎ ಮಾಡಬೇಕು ಎಂಬುದು ತುಂಬ ಜನರ ಕನಸಾಗಿರುತ್ತದೆ. ಏಕೆಂದರೆ, ಇಂತಹ ಶಿಕ್ಷಣ ಸಂಸ್ಥೆಗಳಲ್ಲಿ ಎಂಬಿಎ ಮುಗಿಸಿದರೆ, ದೇಶದ ದೊಡ್ಡ ದೊಡ್ಡ ಕಂಪನಿಗಳಲ್ಲಿ ಲಕ್ಷಾಂತರ ರೂಪಾಯಿ ಸಂಬಳದ ಉದ್ಯೋಗ ದೊರೆಯುತ್ತದೆ. ಇದಕ್ಕೆ ನಿದರ್ಶನ ಎಂಬಂತೆ, ಅಹ್ಮದಾಬಾದ್ ನಲ್ಲಿರುವ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ (IIM Ahmedabad) ಸಂಸ್ಥೆಯಲ್ಲಿ ಎಂಬಿಎ ಮುಗಿಸಿದರೆ ವರ್ಷಕ್ಕೆ 35.5 ಲಕ್ಷ ರೂ. ಪ್ಯಾಕೇಜ್ ಇರುವ ಉದ್ಯೋಗ ಸಿಗುತ್ತದೆ.
ಹೌದು, ಐಐಎಂನಲ್ಲಿ ಅಧ್ಯಯನ ಮಾಡಿದವರಿಗೆ ಪ್ಲೇಸ್ ಮೆಂಟ್ ಆಗಿರುವ ಕುರಿತು ಐಐಎಂ 2025ರ ಸಾಲಿನ ವರದಿಯನ್ನು ಬಿಡುಗಡೆ ಮಾಡಿದೆ. ಇದರ ಪ್ರಕಾರ, ಅಹ್ಮದಾಬಾದ್ ನಲ್ಲಿರುವ ಐಐಎಂನಲ್ಲಿ ಎಂಬಿಎ ಮುಗಿಸಿದವರಿಗೆ ಕನಿಷ್ಠ ಸರಾಸರಿ 34.59 ಲಕ್ಷ ರೂಪಾಯಿಯ ಪ್ಯಾಕೇಜ್ ದೊರೆಯುತ್ತದೆ. ಅದೇ ರೀತಿ, ಗರಿಷ್ಠ 35.5 ಲಕ್ಷ ರೂ. ಪ್ಯಾಕೇಜ್ ಇರುವ ಉದ್ಯೋಗಗಳೂ ವಿದ್ಯಾರ್ಥಿಗಳಿಗೆ ದೊರೆತಿವೆ ಎಂದು ಶಿಕ್ಷಣ ಸಂಸ್ಥೆ ತಿಳಿಸಿದೆ.
ಐಐಎಂಎದಲ್ಲಿರುವ ಪ್ಲೇಸ್ ಮೆಂಟ್ ವಿಭಾಗದ ಮುಖ್ಯಸ್ಥ ವಿಶ್ವನಾಥ ಪಿಂಗಳಿ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. “ಬಿಸಿನೆಸ್ ಕ್ಷೇತ್ರವು ಸವಾಲು ಹಾಗೂ ಸ್ಪರ್ಧೆಯಿಂದ ಕೂಡಿದೆ. ಇಂತಹ ಸಂದರ್ಭದಲ್ಲೂ ಐಐಎಂಎನಲ್ಲಿ ಅಧ್ಯಯನ ಮಾಡಿದವರಿಗೆ ವರ್ಷಕ್ಕೆ 35 ಲಕ್ಷ ರೂ.ಗಿಂತ ಹೆಚ್ಚಿನ ಪ್ಯಾಕೇಜ್ ಇರುವ ಉದ್ಯೋಗಗಳು ದೊರೆಯುತ್ತಿರುವುದು ಖುಷಿಯ ಸಂಗತಿಯಾಗಿದೆ” ಎಂದು ಹೇಳಿದ್ದಾರೆ.
“ವಿದ್ಯಾರ್ಥಿಗಳಿಗೆ ಬೋಧನೆಯ ಜತೆಗೆ ಪ್ರಾಯೋಗಿಕ ಅಧ್ಯಯನ, ಕೌಶಲ ವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ. ಹಾಗೆಯೇ, ನೇಮಕಾತಿ ಮಾಡುವ ಕಂಪನಿಗಳ ಜತೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಅವರಿಗೆ ಅಗತ್ಯವಿರುವ ಕೌಶಲಗಳನ್ನು ವಿದ್ಯಾರ್ಥಿಗಳಲ್ಲಿ ವೃದ್ಧಿಸುತ್ತೇವೆ. ಇದರಿಂದಾಗಿ ಪ್ಲೇಸ್ ಮೆಂಟ್ ವಿಚಾರದಲ್ಲಿ ನಮ್ಮ ಸಂಸ್ಥೆ ಮುಂದಿದೆ” ಎಂದೂ ತಿಳಿಸಿದ್ದಾರೆ.