ಬೆಂಗಳೂರು: ಕೇಂದ್ರ ಸರ್ಕಾರದ ಅಧೀನದಲ್ಲಿರುವ ಇಂಡಿಯಾ ಇನ್ ಫ್ರಾಸ್ಟ್ರಕ್ಚರ್ ಫೈನಾನ್ಸ್ ಕಂಪನಿ ಲಿಮಿಟೆಡ್ ನಲ್ಲಿ (IIFCL) 8 ಹುದ್ದೆಗಳು ಖಾಲಿ ಇದ್ದು, ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. 4 ಮ್ಯಾನೇಜರ್ ಗ್ರೇಡ್ ಬಿ ಹುದ್ದೆಗಳು ಮತ್ತು 4 ಸಹಾಯಕ ಮ್ಯಾನೇಜರ್ ಗ್ರೇಡ್ ಎ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಮೇ 14 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. iifclprojects.in ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಟೆಕ್, ಬಿ.ಇ, ಎಲ್ ಎಲ್ ಬಿ, ಸಿಎ, ಎಂಬಿಎ, ಪಿಜಿಡಿಎಂ ಕೋರ್ಸ್ ಗಳನ್ನು ಮುಗಿಸಿರಬೇಕು. ಅರ್ಜಿ ಸಲ್ಲಿಸಲು, ಸಾಮಾನ್ಯ, ಇಡಬ್ಲ್ಯೂಎಸ್, ಒಬಿಸಿ ವರ್ಗದ ಅಭ್ಯರ್ಥಿಗಳು 600 ರೂ. ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಎಸ್ ಸಿ, ಎಸ್ ಟಿ ಮತ್ತು ಪಿಡಬ್ಲ್ಯೂಡಿ ವರ್ಗದ ಅಭ್ಯರ್ಥಿಗಳು 100 ರೂ. ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
IIFCLನಲ್ಲಿ ಕೆಲಸ ಪಡೆಯಲು ಬಯಸಿದರೆ, ದರ್ಜೆಗೆ ಅನುಗುಣವಾಗಿ ವಯಸ್ಸಿನ ಮಿತಿಯನ್ನು ನಿಗದಿಪಡಿಸಲಾಗಿದೆ. ಇದರಲ್ಲಿ ಮ್ಯಾನೇಜರ್ ಮಟ್ಟಕ್ಕೆ ಅರ್ಜಿ ಸಲ್ಲಿಸುತ್ತಿದ್ದರೆ, ಇದಕ್ಕೆ ವಯಸ್ಸಿನ ಮಿತಿ 40 ವರ್ಷಗಳು. ನೀವು ಸಹಾಯಕ ವ್ಯವಸ್ಥಾಪಕ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸಿದರೆ, ಇದಕ್ಕೆ ವಯಸ್ಸಿನ ಮಿತಿ 30 ವರ್ಷಗಳು. ವಯಸ್ಸಿನ ಮಿತಿಯನ್ನು ಗಮನದಲ್ಲಿಟ್ಟುಕೊಂಡು ಅರ್ಜಿ ಸಲ್ಲಿಸಬೇಕಿದೆ.
ಅಭ್ಯರ್ಥಿಗಳು ಸಲ್ಲಿಸಿದ ಅರ್ಜಿಗಳನ್ನು ಪರಿಶೀಲಿಸಿ, ಮೆರಿಟ್ ಲಿಸ್ಟ್ ಬಿಡುಗಡೆ ಮಾಡಲಾಗುತ್ತದೆ. ಇದಾದ ಬಳಿಕ ಆನ್ ಲೈನ್ ಮೂಲಕ ಪರೀಕ್ಷೆ ನಡೆಸಲಾಗುತ್ತದೆ. ಪರೀಕ್ಷೆಯಲ್ಲಿ ತೋರಿದ ಫಲಿತಾಂಶವನ್ನು ಆಧರಿಸಿ ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ. ನಂತರ ನೇಮಕಾತಿ ಆದೇಶ ಹೊರಡಿಸಲಾಗುತ್ತದೆ. ದೇಶದ ಯಾವುದೇ ಭಾಗದಲ್ಲಿ ಕೆಲಸ ಮಾಡಲು ಇಚ್ಛಿಸುವವರು ಅರ್ಜಿ ಸಲ್ಲಿಸಬಹುದಾಗಿದೆ.