ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಅನಗತ್ಯವಾಗಿ ಕುಡಿಯುವ ನೀರು ಬಳಕೆ ಮಾಡಿದರೆ ದಂಡ ಹಾಕುವುದಾಗಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ.
ಬೇಸಿಗೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ನೀರನ್ನು ಮಿತವಾಗಿ ಬಳಕೆ ಮಾಡಬೇಕು. ಇಲ್ಲವಾದರೆ ನೀರಿನ ಅಭಾವ ಉಂಟಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ನೀರಿನ ಅಭಾವ ತಡೆಗಟ್ಟಲು ಜಲಮಂಡಳಿ ಮುಂದಾಗಿದೆ. ಈಗಾಗಲೇ ಸಾರ್ವಜನಿಕರಿಗೆ ಅನಗತ್ಯ ನೀರನ್ನು ಪೋಲು ಮಾಡದಂತೆ ಸೂಚನೆ ನೀಡಿದೆ.
ಅನಗತ್ಯವಾಗಿ ಕುಡಿಯುವ ನೀರನ್ನು ವಾಹನ ಸ್ವಚ್ಚತೆ, ಕೈ ದೋಟ, ಕಾರಂಜಿ, ಕಟ್ಟಡ ನಿರ್ಮಾಣಕ್ಕೆ ಬಳಕೆ ಮಾಡಿದರೆ ದಂಡ ಹಾಕಲು ಜಲ ಮಂಡಳಿ ಮುಂದಾಗಿದೆ. ಸಿನಿಮಾ ಮಂದಿರ, ಮಾಲ್ ಗಳಲ್ಲಿ ಕುಡಿಯುವ ನೀರು ಹೊರತು ಪಡಿಸಿ ಬೇರೆ ನೀರನ್ನೇ ಬಳಕೆ ಮಾಡಬೇಕು. ರಸ್ತೆ ನಿರ್ಮಾಣ ಸೇರಿದಂತೆ ಕಟ್ಟಡ ನಿರ್ಮಾಣಗಳಿಗೆ ಕುಡಿಯುವ ನೀರನ್ನು ಬಳಕೆ ಮಾಡುವಂತಿಲ್ಲ. ಒಂದು ವೇಳೆ ಕುಡಿಯುವ ನೀರು ಬಳಕೆ ಮಾಡುತ್ತಿರುವುದು ಕಂಡು ಬಂದಲ್ಲಿ 500 ರೂ. ದಂಡ ವಿಧಿಸಲಾಗುತ್ತದೆ. ಒಂದು ವೇಳೆ ತಪ್ಪು ಮರುಕಳಿಸಿದರೆ 5000 ಸಾವಿರ ರೂ. ಜೊತೆಗೆ ಪ್ರತಿ ದಿನ 500 ರೂ. ದಂಡ ವಿಧಿಸಲಾಗುವುದು ಎಂದು ಜಲಮಂಡಳಿ ಆದೇಶ ಹೊರಡಿಸಿದೆ.