ಮನೆಯಲ್ಲಿ ಸುಮ್ಮನೆ ಟಿವಿ ವೀಕ್ಷಿಸುತ್ತಾ ಕುಳಿತಿರುತ್ತೀರಿ ಅಥವಾ ಮಲಗಿಕೊಂಡು ಮೊಬೈಲ್ ಮೇಲೆ ಬೆರಳಾಡಿಸುತ್ತಿರುತ್ತೀರಿ… ಕಿವಿಯ ಬಳಿ ಒಂದೊಂದಾಗಿ ಸೊಳ್ಳೆಗಳು ಗುಂಯ್‌ಗುಡುತ್ತಾ ಬಂದು, ಕಿರಿಕ್ ಮಾಡುತ್ತಿರುತ್ತವೆ. ಹಿಂಸೆಯಾಗಲು ಶುರುವಾಗುತ್ತೆ. ಟಪ್….ಟಪ್… ಎಂದು ಹೊಡೆದು ಅವುಗಳನ್ನು ನೆಲಕ್ಕುರುಳಿಸುತ್ತೀರಿ…
ಈ ಕೆಲಸ ಸಾಮಾನ್ಯವಾಗಿ ಎಲ್ಲರೂ ಮಾಡುತ್ತಾರೆ. ಇಂಥ ಎಷ್ಟು ಸೊಳ್ಳೆಗಳನ್ನು ನೀವು ಕೊಂದಿರಬೇಡ? ಆದರೆ, ಸೊಳ್ಳೆ ಕೊಂದಿದ್ದಕ್ಕೆ ನಿಮಗೆ ಯಾರಾದರೂ ಬಹುಮಾನ ಕೊಟ್ಟಿದ್ದಿದೆಯೇ? ಖಂಡಿತಾ ಇಲ್ಲ.
ಆದರೆ, ಫಿಲಿಪ್ಪೀನ್ಸ್‌ನ ಗ್ರಾಮವೊಂದರಲ್ಲಿ ಸೊಳ್ಳೆ ಕೊಂದವರಿಗೆ ಬಹುಮಾನ ಸಿಗುತ್ತಿದೆ. ಸೊಳ್ಳೆಯನ್ನು ಜೀವಂತವಾಗಿ ಸೆರೆಹಿಡಿದರೂ ಸರಿ, ಸೊಳ್ಳೆಯ ಡೆಡ್ ಬಾಡಿ ತಂದುಕೊಟ್ಟರೂ ಸರಿ, ನಿಮಗೆ ಬಹುಮಾನ ಗ್ಯಾರಂಟಿ! ನೀವು ಕೊಲ್ಲುವ ಅಥವಾ ಜೀವಂತವಾಗಿ ತಂದುಕೊಡುವ ಪ್ರತಿ 5 ಸೊಳ್ಳೆಗೆ 1.50 ರೂಪಾಯಿಯಷ್ಟು ಹಣ ನಿಮಗೆ ಕೊಡಲಾಗುತ್ತದೆ.
ಇದು ನಗುವ ವಿಷಯವಲ್ಲ. ಇಡೀ ಗ್ರಾಮದ ಕ್ಷೇಮಾಭಿವೃದ್ಧಿಗಾಗಿ ಈ ಬಹುಮಾನ ನೀಡಲಾಗುತ್ತಿದೆಯಂತೆ. ಫಿಲಿಪ್ಪೀನ್ಸ್‌ನಲ್ಲಿ ಇತ್ತೀಚೆಗೆ ಡೆಂಗ್ಯೂ ಗಣನೀಯವಾಗಿ ಹೆಚ್ಚಳವಾಗುತ್ತಿರುವ ಕಾರಣ, ಅಲ್ಲಿನ ಒಂದು ಗ್ರಾಮವು ಇಂಥದ್ದೊಂದು ಕ್ರಮ ಕೈಗೊಂಡಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ಅಭಿಯಾನ ಆರಂಭವಾಗಿರುವುದು ಮಧ್ಯ ಮನಿಲಾದ ಮಂಡಲುಯೊಂಗ್ ನಗರದ ಬರಂಗೇ ಎಡಿಷನ್ ಹಿಲ್ಸ್ ( Barangay Edition Hills)ಎಂಬಲ್ಲಿನ ಗ್ರಾಮದಲ್ಲಿ. ಇಲ್ಲಿನ 1,00,000ಕ್ಕೂ ಹೆಚ್ಚು ನಿವಾಸಿಗಳು ಜನದಟ್ಟಣೆಯ ಪ್ರದೇಶಗಳಲ್ಲಿ ಮತ್ತು ಕಾಂಡೋಮಿನಿಯಂ ಟವರ್ಸ್‌ನಲ್ಲಿ ವಾಸಿಸುತ್ತಿದ್ದಾರೆ.

ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗ್ರಾಮದ ಮುಖ್ಯಸ್ಥ ಕಾರ್ಲಿಟೊ ಸೆರ್ನಾಲ್ ಅವರು, ಸೊಳ್ಳೆ ಕೊಂದವರಿಗೆ ಬಹುಮಾನ ಘೋಷಿಸುವ ನಿರ್ಧಾರವನ್ನು ಇತ್ತೀಚೆಗೆ ಕೈಗೊಂಡಿದ್ದಾರೆ. ಪ್ರತಿ ಐದು ಸೊಳ್ಳೆಗಳು ಅಥವಾ ಸೊಳ್ಳೆಯ ಲಾರ್ವಾಗಳಿಗೆ ಒಂದು ಪೆಸೊ (1.50 ರೂಪಾಯಿ) ಬಹುಮಾನವನ್ನು ನೀಡುವುದಾಗಿ ಘೋಷಿಸಿದ್ದಾರೆ. ಜೀವಂತ ಸೊಳ್ಳೆಗಳನ್ನು ತಂದುಕೊಟ್ಟರೆ ನೇರಳಾತೀತ ಬೆಳಕನ್ನು(ಅಲ್ಟ್ರಾವಯಲೇಟ್ ಲೈಟ್) ಹರಿಸಿ ಅವುಗಳನ್ನು ಕೊಲ್ಲಲಾಗುತ್ತದೆ.
ಈ ಅಭಿಯಾನ ಪ್ರಾರಂಭವಾಗಿದ್ದೇ ಆಗಿದ್ದು, ಸುಮಾರು 21 ಮಂದಿ ಸೊಳ್ಳೆ ಬೇಟೆಗಾರರು ಗ್ರಾಮಕ್ಕೆ ಲಗ್ಗೆಯಿಟ್ಟಿದ್ದು, ಒಟ್ಟು 700 ಸೊಳ್ಳೆಗಳು ಮತ್ತು ಲಾರ್ವಾಗಳನ್ನು ಈಗಾಗಲೇ ಹಿಡಿದು ಗ್ರಾಮದ ಕಚೇರಿಗೆ ತಂದುಕೊಟ್ಟಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.
64 ವರ್ಷದ ಮಿಗುಯೆಲ್ ಲಾಬಾಗ್ ಎಂಬ ವ್ಯಕ್ತಿಯೊಬ್ಬರು ಜಗ್‌ವೊಂದರಲ್ಲಿ ನೀರು ಹಾಕಿ, ಅದರೊಳಗೆ 45 ಕಪ್ಪು ಸೊಳ್ಳೆಯ ಲಾರ್ವಾಗಳನ್ನು ಮುಳುಗಿಸಿ ತಂದು, ಒಂಬತ್ತು ಪೆಸೊ (15 ಸೆಂಟ್ಸ್) ಬಹುಮಾನವನ್ನು ಪಡೆದುಕೊಂಡಿದ್ದಾರೆ. ನಂತರ ಮಾತನಾಡಿದ ಅವರು, ನನಗೆ ಈ ಬಹುಮಾನ ಬಹಳ ಸಂತೋಷ ತಂದಿದೆ. ನಾನು ಇದರಿಂದ ಒಂದು ಒಳ್ಳೆಯ ಕಾಫಿ ಕುಡೀಬಹುದು ಎಂದು ನಗುತ್ತಾ ಹೇಳಿದ್ದಾರೆ. ಒಟ್ಟಿನಲ್ಲಿ ಈ ಅಭಿಯಾನವು ಒಂದು ತಿಂಗಳ ಕಾಲ ನಡೆಯಲಿದೆಯಂತೆ.
ಹೆಚ್ಚುತ್ತಿರುವ ಡೆಂಗ್ಯೂ ಪ್ರಕರಣಗಳು
ಫಿಲಿಪ್ಪೀನ್ಸ್‌ನಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಡೆಂಗ್ಯೂ ಪ್ರಕರಣಗಳು ದೇಶಾದ್ಯಂತ ಭಾರೀ ಕಳವಳಕ್ಕೆ ಕಾರಣವಾಗಿದೆ. ಜನವರಿಯಿಂದೀಚಿಗೆ ಕ್ವೆಝೋನ್ ನಗರದ 1,769 ನಿವಾಸಿಗಳಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಮಕ್ಕಳೂ ಸೇರಿದಂತೆ 10 ಮಂದಿ ಈಗಾಗಲೇ ಸಾವಿಗೀಡಾಗಿದ್ದಾರೆ.
ಇನ್ನೂ ಎಂಟು ಪ್ರದೇಶಗಳಲ್ಲಿ ಮಾರಣಾಂತಿಕ ವೈರಲ್ ಸೋಂಕಿನ ಪ್ರಕರಣಗಳು ಹೆಚ್ಚುತ್ತಿವೆ. ಈ ವರ್ಷ ಫೆಬ್ರವರಿ 1ರವರೆಗೆ ಫಿಲಿಪ್ಪೀನ್ಸ್ ನಲ್ಲಿ ಕನಿಷ್ಠ 28,234 ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ. ಆರೋಗ್ಯ ಇಲಾಖೆಯ ಅಂಕಿಅಂಶಗಳ ಪ್ರಕಾರ, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಇದು ಶೇಕಡಾ 40 ರಷ್ಟು ಹೆಚ್ಚಳವಾಗಿದೆ. ಡೆಂಗ್ಯೂ ವಿರುದ್ಧ ಹೋರಾಡಲು ಸ್ವಚ್ಛತೆ, ಕಾಲುವೆಗಳನ್ನು ಮುಚ್ಚುವುದು ಮತ್ತು ನೈರ್ಮಲ್ಯ ಅಭಿಯಾನಗಳನ್ನೂ ನಡೆಸಲಾಗುತ್ತಿದೆ.
ಇನ್ನೊಂದೆಡೆ, ಜನರೇನಾದರೂ ಬಹುಮಾನಕ್ಕಾಗಿ ಸೊಳ್ಳೆಗಳನ್ನು ಸಂತಾನೋತ್ಪತ್ತಿ ಮಾಡಲು ಪ್ರಾರಂಭಿಸಿದರೆ ಏನಾಗಬಹುದು ಎಂಬ ಆತಂಕವೂ ಅಧಿಕಾರಿಗಳನ್ನು ಕಾಡಲಾರಂಭಿಸಿದೆ.
ಇನ್ನು ಕ್ವೆಜಾನ್ ನಗರದ ಮತ್ತೊಂದು ಹಳ್ಳಿಯ ಅಧಿಕಾರಿಗಳು ಸೊಳ್ಳೆಗಳನ್ನು ತಿನ್ನಲೆಂದು ಕಪ್ಪೆಗಳ ಹಿಂಡುಗಳನ್ನು ಬಿಡುಗಡೆ ಮಾಡಲು ಚಿಂತನೆ ನಡೆಸಿದ್ದಾರೆ. ಅದೇನೇ ಆದರೂ, “ಡೆಂಗ್ಯೂ ವಿರುದ್ಧ ಹೋರಾಡಲು ಸ್ಥಳೀಯರು ಮಾಡುತ್ತಿರುವ ವಿನೂತನ ಐಡಿಯಾಗಳು ಶ್ಲಾಘನೀಯ” ಎನ್ನುತ್ತಿದೆ ಫಿಲಿಪ್ಪೀನ್ಸ್ ಆರೋಗ್ಯ ಇಲಾಖೆ.