ವಾಷಿಂಗ್ಟನ್: ಉಳಿದಿರುವ ಒತ್ತೆಯಾಳುಗಳನ್ನು ಕೂಡಲೇ ಬಿಡುಗಡೆ ಮಾಡಿ, ಇಲ್ಲದಿದ್ದರೆ ನಿಮ್ಮ ಸಾವು ಖಚಿತ ಎಂದು ಹಮಾಸ್(Hamas) ಉಗ್ರರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ಗಾಜಾ ತೊರೆಯುವಂತೆ ಹಮಾಸ್‌ಗೆ ಗಡುವನ್ನೂ ವಿಧಿಸಿದ್ದಾರೆ.
ಕದನ ವಿರಾಮಕ್ಕೆ ಸಂಬಂಧಿಸಿ ಇಸ್ರೇಲ್‌ಗೆ ಬೆಂಬಲ ಸೂಚಿಸಿರುವ ಟ್ರಂಪ್(Donald Trump), ಇಸ್ರೇಲ್ ಕೇಳಿರುವ ಶತಕೋಟಿ ಡಾಲರ್ ಶಸ್ತ್ರಾಸ್ತ್ರಗಳನ್ನು ತ್ವರಿತವಾಗಿ ಅವರಿಗೆ ರವಾನಿಸಲು ಅಮೆರಿಕ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದೆ. “ಇಸ್ರೇಲ್ ತಮ್ಮ ಕೆಲಸವನ್ನು ಆದಷ್ಟು ಬೇಗ ಮುಗಿಸಲಿ ಎಂಬ ಕಾರಣಕ್ಕೆ ಅವರಿಗೆ ಏನು ಬೇಕೋ ಎಲ್ಲವನ್ನೂ ನಾವು ಕಳುಹಿಸುತ್ತಿದ್ದೇವೆ” ಎಂದೂ ಟ್ರಂಪ್ ಹೇಳಿದ್ದಾರೆ.
BREAKING: DONALD TRUMP CALLS FOR GAZA GENOCIDE pic.twitter.com/E11gyqK0Vh
— Sulaiman Ahmed (@ShaykhSulaiman) March 5, 2025
“ಈ ಕೂಡಲೇ ಎಲ್ಲ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿ. ನೀವು ಕೊಂದಿರುವ ಎಲ್ಲ ಒತ್ತೆಯಾಳುಗಳ ಮೃತದೇಹಗಳನ್ನೂ ಹಸ್ತಾಂತರಿಸಿ. ಇಲ್ಲವೇ ನಿಮ್ಮ ಕಥೆ ಮುಗಿಯಿತು ಎಂದೇ ಅರ್ಥ” ಎಂದು ಟ್ರಂಪ್ ತಮ್ಮ ಟ್ರುಥ್ ಸೋಷಿಯಲ್ ಪ್ಲಾಟ್‌ಫಾರಂನಲ್ಲಿ ಹಮಾಸ್‌ಗೆ ಖಡಕ್ ಸಂದೇಶ ರವಾನಿಸಿದ್ದಾರೆ.
“ಇದು ನಿಮಗೆ ನೀಡಲಾಗುತ್ತಿರುವ ಕೊನೆಯ ಎಚ್ಚರಿಕೆ! ಹಮಾಸ್ ನಾಯಕತ್ವಕ್ಕೆ ನಮ್ಮ ಆದೇಶವೊಂದೇ- ಕೂಡಲೇ ಗಾಜಾವನ್ನು ತೊರೆಯಿರಿ. ನಿಮಗೆ ಇನ್ನೂ ಅವಕಾಶವಿದೆ” ಎಂದೂ ಹೇಳಿದ್ದಾರೆ.
ಅಕ್ಟೋಬರ್ 7, 2023 ರಂದು ಹಮಾಸ್ ನಡೆಸಿದ ದಾಳಿಗೆ ಪ್ರತಿಯಾಗಿ ಇಸ್ರೇಲ್ ನಡೆಸಿದ ನಿರಂತರ ಸೇನಾ ಕಾರ್ಯಾಚರಣೆಯಿಂದ ಈಗಾಗಲೇ ನಿರ್ನಾಮವಾಗಿದೆ. ಹಮಾಸ್ ಈಗ ಅಲ್ಲಿಂದ ಹೊರಡಿದ್ದರೆ, ಗಾಜಾ ಮತ್ತಷ್ಟು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದೂ ಟ್ರಂಪ್(Donald Trump) ಎಚ್ಚರಿಸಿದ್ದಾರೆ.
“ಗಾಜಾದ ಜನರಿಗಾಗಿ ಸುಂದರವಾದ ಭವಿಷ್ಯ ಕಾಯುತ್ತಿದೆ. ಆದರೆ ನೀವು ಒತ್ತೆಯಾಳುಗಳನ್ನು ಇನ್ನೂ ಹಿಡಿದಿಟ್ಟುಕೊಂಡರೆ ನಾವು ಸುಮ್ಮನಿರಲ್ಲ. ನಿಮಗೆಲ್ಲರಿಗೂ ಸಾವು ಖಚಿತವಾಗುತ್ತದೆ!” ಎಂದು ಟ್ರಂಪ್ ಹೇಳಿದ್ದಾರೆ.
ಇದನ್ನೂ ಓದಿ: Language row: ಮುಂಬೈನಲ್ಲಿ ವಾಸಿಸಲು ಮರಾಠಿ ಗೊತ್ತಿರಬೇಕಾಗಿಲ್ಲ: ಆರ್‌ಎಸ್‌ಎಸ್ ನಾಯಕ ವಿವಾದ
“ಅಕ್ಟೋಬರ್ 7 ರ ದಾಳಿಯ ವೇಳೆ ವಶಕ್ಕೆ ಪಡೆದ ಉಳಿದ ಒತ್ತೆಯಾಳುಗಳನ್ನು ಹಮಾಸ್ ಹಸ್ತಾಂತರಿಸದಿದ್ದರೆ, ಊಹಿಸಲಾಗದ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ” ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಎಚ್ಚರಿಕೆ ನೀಡಿದ ಬೆನ್ನಲ್ಲೇ ಟ್ರಂಪ್ ಅವರೂ ಇಂಥದ್ದೊಂದು ಎಚ್ಚರಿಕೆ ಸಂದೇಶ ರವಾನಿಸಿರುವುದು ಮಹತ್ವ ಪಡೆದಿದೆ.
ಕಳೆದ ಆರು ವಾರಗಳ ಕಾಲ ಇಸ್ರೇಲ್ ಒತ್ತೆಯಾಳುಗಳು ಮತ್ತು ಪ್ಯಾಲೆಸ್ತೀನ್ ಕೈದಿಗಳ ಪರಸ್ಪರ ಹಸ್ತಾಂತರ ಪ್ರಕ್ರಿಯೆ ನಡೆದಿದ್ದು, ಎರಡೂ ದೇಶಗಳಲ್ಲಿ ಶಾಂತಿ ನೆಲೆಸಿತ್ತು. ಕಳೆದ ವಾರಾಂತ್ಯದಲ್ಲಿ ಕದನ ವಿರಾಮದ ಮೊದಲ ಹಂತ ಮುಕ್ತಾಯವಾಗಿತ್ತು. ಮೊದಲ ಹಂತದ ಕದನ ವಿರಾಮವನ್ನು ಏಪ್ರಿಲ್ ಮಧ್ಯದವರೆಗೆ ವಿಸ್ತರಿಸಲು ಬಯಸುವುದಾಗಿ ಇಸ್ರೇಲ್ ಹೇಳಿದ್ದರೆ, ಹಮಾಸ್ ಎರಡನೇ ಹಂತದ ಒಪ್ಪಂದಕ್ಕೆ ಬಂದು ಯುದ್ಧವನ್ನು ಶಾಶ್ವತವಾಗಿ ಕೊನೆಗೊಳಿಸಲು ಬಯಸಿತ್ತು.
ಆದರೆ, ಇಸ್ರೇಲ್ ಏಕಾಏಕಿ ಗಾಜಾಗೆ ಎಲ್ಲ ರೀತಿ ಸರಕುಗಳು ಮತ್ತು ಸರಬರಾಜುಗಳ ಪ್ರವೇಶವನ್ನು ನಿರ್ಬಂಧಿಸುವ ಮೂಲಕ ಬೆದರಿಕೆ ತಂತ್ರ ಪ್ರಯೋಗಿಸಿ, ಹಮಾಸ್ ಮೇಲೆ ಒತ್ತಡ ಹೆಚ್ಚಿಸಿದೆ. ಅಲ್ಲದೆ, “ಹಮಾಸ್ ನಿಜವಾಗಿಯೂ ತೀವ್ರ ಹೊಡೆತವನ್ನು ಅನುಭವಿಸಿದೆ. ಆದರೆ ಅದನ್ನು ಇನ್ನೂ ಸೋಲಿಸಲು ಆಗಿಲ್ಲ. ಹಾಗೆಯೇ ನಮ್ಮ ಕಾರ್ಯಾಚರಣೆಯೂ ಇನ್ನೂ ಪೂರ್ಣಗೊಂಡಿಲ್ಲ” ಎಂದು ಇಸ್ರೇಲ್ ಹೊಸ ಸೇನಾ ಮುಖ್ಯಸ್ಥ ಇಯಾಲ್ ಝಮೀರ್ ಬುಧವಾರ ಎಚ್ಚರಿಸಿದ್ದಾರೆ.
ಫ್ರಾನ್ಸ್, ಬ್ರಿಟನ್ ಮತ್ತು ಜರ್ಮನಿ ಬುಧವಾರ ಗಾಜಾದಲ್ಲಿನ ಮಾನವೀಯ ಪರಿಸ್ಥಿತಿಯನ್ನು “ದುರಂತ” ಎಂದು ಕರೆದಿದ್ದು, ಅಲ್ಲಿಗೆ ಹೋಗಬೇಕಾಗಿರುವ ಮಾನವೀಯ ಸಹಾಯವನ್ನು “ಅಡೆತಡೆಯಿಲ್ಲದ” ಸರಬರಾಜು ಆಗುವಂತೆ ನೋಡಿಕೊಳ್ಳಿ ಎಂದು ಇಸ್ರೇಲ್ ಅನ್ನು ಒತ್ತಾಯಿಸಿವೆ.
ಇಸ್ರೇಲ್ ಗಾಜಾಗೆ ನೆರವನ್ನು ನಿರ್ಬಂಧಿಸಿರುವುದು ಹಸಿವನ್ನು ಯುದ್ಧದ ಅಸ್ತ್ರವಾಗಿ ಬಳಸುವುದಕ್ಕೆ ಸಮ ಎಂದು ದಕ್ಷಿಣ ಆಫ್ರಿಕಾ ಹೇಳಿದೆ.