ಬೆಳಗಾವಿ : ಪಂಚಮಸಾಲಿ ಹೋರಾಟದ ವಿವಾದ ರಾಜ್ಯದಲ್ಲಿ ಜೋರಾಗಿದ್ದು, ಸರ್ಕಾರದ ವಿರುದ್ಧ ಹಲವರು ಮುಗಿ ಬಿದ್ದಿದ್ದಾರೆ.
ಸದ್ಯ ಪಂಚಮಸಾಲಿ ಹೋರಾಟದ ನೇತೃತ್ವ ವಹಿಸಿರುವ ಜಯಮೃತ್ಯುಂಜಯ ಶ್ರೀ ಸಿಎಂ ಸಿದ್ದರಾಮಯ್ಯಗೆ ಸವಾಲು ಹಾಕಿದ್ದಾರೆ. ನಮ್ಮ ಹೋರಾಟ ಅಸಂವಿಧಾನಿಕವಾಗಿದ್ದರೆ, ನಮ್ಮ ಹೋರಾಟ ಬೆಂಬಲಿಸಿದ್ದ ನಿಮ್ಮದೇ ಸರ್ಕಾರದ ಸಚಿವ, ಶಾಸಕರನ್ನು ವಜಾ ಮಾಡಿ ಎಂದು ಸವಾಲು ಹಾಕಿದ್ದಾರೆ.
ನಮ್ಮ ಹೋರಾಟದ ವಿರುದ್ಧ ಹೇಳಿಕೆ ನೀಡಿರುವ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಯೇ ಅಸಂವಿಧಾನಿಕ. ಕಲಾಪದಲ್ಲಿ ಈ ಪದ ಬಳಕೆ ಮಾಡಿರುವುದರಿಂದ ರಾಜ್ಯದ ಲಿಂಗಾಯತರಿಗೆ ಅಪಮಾನವಾಗಿದೆ. ಕೂಡಲೇ, ಈ ಹೇಳಿಕೆಯನ್ನು ಕಡತದಿಂದ ತೆಗೆಯಬೇಕು ಹಾಗೂ ಸಿಎಂ ತಮ್ಮ ಹೇಳಿಕೆ ವಾಪಸ್ ಪಡೆದು ಸಮಾಜದ ಕ್ಷಮೆ ಕೇಳಬೇಕು. ಇಲ್ಲವಾದರೆ, ಹೋರಾಟದ ವೇದಿಕೆಗೆ ಆಗಮಿಸಿ ಬೆಂಬಲಿಸಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಚನ್ನರಾಜ ಹಟ್ಟಿಹೋಳಿ ಸೇರಿದಂತೆ ಭಾಗವಹಿಸಿದವರನ್ನು ವಜಾ ಮಾಡಿ ಎಂದು ಸವಾಲು ಹಾಕಿದ್ದಾರೆ.