ಬೆಂಗಳೂರು: ಬಿಜೆಪಿ ಮನೆ ಈಗ ಒಡೆದು ಹೋಳಾಗಿದೆ. ಒಂದಲ್ಲ, ನಾಲ್ಕಾರು ಬಣಗಳು ಸೃಷ್ಟಿಯಾಗುತ್ತಿವೆ. ಪರಸ್ಪರ ತಮ್ಮ ಪಕ್ಷದವರೇ ಬಹಿರಂಗ ಹೇಳಿಕೆ ನೀಡುತ್ತಾ ಕಿತ್ತಾಡುತ್ತಿದ್ದಾರೆ. ದಿನಕ್ಕೊಂದು ಆಂತರಿಕ ಕಚ್ಚಾಟ ಸ್ಫೋಟವಾಗುತ್ತಿವೆ. ಯತ್ನಾಳ್, ರಮೇಶ್ ಜಾರಕಿಹೊಳಿ, ಶ್ರೀರಾಮುಲು, ಗಾಲಿ ಜನಾರ್ಧನ ರೆಡ್ಡಿ ನಂತರ ಈಗ ಸಂಸದ ಡಾ. ಕೆ. ಸುಧಾಕರ್ ಸರತಿ ಬಂದಿದೆ.
ಜಿಲ್ಲಾಧ್ಯಕ್ಷರ ನೇಮಕ ವಿಚಾರದಲ್ಲಿ ಸುಧಾಕರ್, ವಿಜಯೇಂದ್ರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗಾಗಿ ಈಗ ವಿಜಯೇಂದ್ರ ಬಣ ಸುಧಾಕರ್ ವಿರುದ್ಧ ತಿರುಗಿ ಬಿದ್ದಿದೆ. ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಗುಡುಗಿದ್ದರು. ಈಗ ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್, ಮುಗಿ ಬಿದ್ದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಧಾಕರ್ ರಾಜ್ಯಾಧ್ಯಕ್ಷ ವಿಜಯೇಂದ್ರ ಬಗ್ಗೆ ಬಹಳ ಕೇವಲವಾಗಿ ಮಾತನಾಡಿದ್ದಾರೆ. ಅವರ ಮಾತುಗಳು ನಮಗೆ ಸರಿ ಬಂದಿಲ್ಲ. ಏನೇ ಇದ್ದರೂ ರಾಜ್ಯಾಧ್ಯಕ್ಷರ ಜೊತೆ ಮಾತಾಡಬಹುದಿತ್ತು. ಪರೋಕ್ಷವಾಗಿ ನನ್ನ ಕ್ಷೇತ್ರದ ಬಗ್ಗೆಯೂ ಮಾತನಾಡಿದ್ದಾರೆ. ನಾನೇನು ದಡ್ಡ ಅಲ್ಲ. ಸುಧಾಕರ್ ನನ್ನಿಂದಲೇ ಸರ್ಕಾರ ರಚನೆ ಆಯಿತು ಎಂದು ಹೇಳಿದ್ದಾರೆ. 17 ಶಾಸಕರು ಬಂದಾಗ ಕೊನೆಯದಾಗಿ ಮೆಜಾರಿಟಿ ಆದ ಬಳಿಕ ಬಂದವರು ಸುಧಾಕರ್. ಸುಧಾಕರ್ ಮೇಲೆ ಹಲ್ಲೆ ಆದಾಗ ರಕ್ಷಣೆ ಮಾಡಿ ಮನೆಗೆ ಕರೆದುಕೊಂಡು ಹೋಗಿ ಬಿಟ್ಟವನು ನಾನು. ಸಮರ್ಥ ಸಚಿವರಾಗಿದ್ದೂ ಸಾಕಷ್ಟು ಅನುದಾನ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಹಾಕಿದರೂ ಯಾಕೆ ನೀವು ಸೋತಿರಿ? ನಿಮಗೆ ಅಸಮಾಧಾನ ಇರಬಹುದು. ಆದರೆ ವಿಜಯೇಂದ್ರ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುಧಾಕರ್, ಯತ್ನಾಳ್ ಸ್ವತಂತ್ರವಾಗಿ ಸ್ಪರ್ಧಿಸಿ ಗೆದ್ದು ಬನ್ನಿ. ಆಗ ನಿಮ್ಮ ಜನಪ್ರಿಯತೆ ಒಪ್ಪಿಕೊಳ್ಳೋಣ. ಬಿಜೆಪಿಗೆ ಬಂದು ವಾಪಸ್ ಹೋದರೆ ಉದ್ಧಾರ ಆಗಿದ್ದು ಇಲ್ಲ. ಸುಧಾಕರ್ ನೀವು ನಾಳೆ ಸಿಎಂ ಆಗಬಹುದೇನೋ. ನೀವು ಪಕ್ಷದಲ್ಲಿ ಇರಿ ಅಂತಾ ನಾವಂತೂ ಹೇಳಲ್ಲ. ಹೋದರೆ ಸನ್ಮಾನ ಮಾಡಿ ಕಳುಹಿಸಿಕೊಟ್ಟು ಸಂಘಟನೆ ಮಾಡುತ್ತೇನೆ. ಮುಂದಿನ ಚುನಾವಣೆಗೆ ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರದಲ್ಲಿ ನಾನೇ ಪ್ರವಾಸ ಮಾಡುತ್ತೇನೆ ಎಂದು ಸವಾಲು ಹಾಕಿದ್ದಾರೆ.
ನನಗೆ ರಾಜ್ಯಾಧ್ಯಕ್ಷರು ಜವಾಬ್ದಾರಿ ಕೊಡಲಿ, ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಸಂಘಟನೆ ಮಾಡಿ ತೋರಿಸುತ್ತೇನೆ. ಚಾಲೆಂಜ್ ಇದು. ನನ್ನ ಸಹವಾಸ ಗೊತ್ತಿಲ್ಲ. ನಾನು ಸ್ನೇಹಕ್ಕೂ ಸಿದ್ಧ, ಸಮರಕ್ಕೂ ಸಿದ್ಧ. ನೂರಕ್ಕೆ ನೂರು ನೀನು ಪಕ್ಷದಲ್ಲಿ ಇರಲ್ಲ. ಒಂದು ಕಾಲು ಹೊರಗೆ ಇಟ್ಟೇ ರಾಜಕೀಯ ಮಾಡುತ್ತಿರುವೆ ಎಂದು ಗುಡುಗಿದ್ದಾರೆ. ಯತ್ನಾಳ್ ಕೂಡಾ ಬಹಿರಂಗವಾಗಿ ಮಾತಾಡುತ್ತಿದ್ದಾರೆ. ರಾಜ್ಯಾಧ್ಯಕ್ಷರನ್ನು ಬದಲಾವಣೆ ಮಾಡಿಕೊಂಡು ಬರುತ್ತೇನೆ ಅಂತಾರೆ. ನಿಮ್ಮಂತಹವರು ಪಕ್ಷದಲ್ಲಿ ಇರುವುದಕ್ಕಿಂತ ಬಿಟ್ಟು ಹೋದರೇನೇ ಉತ್ತಮ ಎಂದು ಗುಡುಗಿದ್ದಾರೆ.