ನವದೆಹಲಿ: ಮನೆಯಲ್ಲಿ ಕಾಲಾವಧಿ ಮೀರಿದ ಅಥವಾ ಅನಗತ್ಯ ಔಷಧಿಗಳಿವೆಯೇ? ಅವುಗಳನ್ನು ಎಸೆಯುವ ಮೊದಲು ಎರಡು ಬಾರಿ ಯೋಚಿಸಿ.
ಕೆಲವು ಔಷಧಿಗಳನ್ನು ನೀವು ಎಲ್ಲೆಂದರಲ್ಲಿ ಬಿಸಾಕುವುದರಿಂದ ಅದು ಜನರು ಅಥವಾ ಪ್ರಾಣಿಗಳ ಜೀವಕ್ಕೆ ಹಾನಿ ಉಂಟುಮಾಡಬಹುದು. ಅದರ ಬದಲಿಗೆ, ಅವುಗಳನ್ನು ನಿಮ್ಮ ಮನೆಯ ಶೌಚಾಲಯಗಳಲ್ಲಿ ಫ್ಲಶ್ ಮಾಡುವುದೇ ಉತ್ತಮ ಉಪಾಯ.
ಹೀಗೆಂದು ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯೇ (CDSCO) ತಿಳಿಸಿದೆ. ಶೌಚಾಲಯಗಳಲ್ಲಿ ಫ್ಲಶ್ ಮಾಡಬಹುದಾದ ಇಂತಹ ಕನಿಷ್ಠ 17 ಔಷಧಿಗಳ ಪಟ್ಟಿಯನ್ನು ನಿಯಂತ್ರಕ ಸಂಸ್ಥೆ ನೀಡಿದೆ. ಫಾರ್ಮಾಬಿಜ್ ವರದಿಯ ಪ್ರಕಾರ, ಈ ಪಟ್ಟಿಯಲ್ಲಿರುವ ಹೆಚ್ಚಿನ ಔಷಧಿಗಳು ಒಪಿಯಾಯ್ಡ್‌ಗಳು ಅಥವಾ ನೋವು, ಆತಂಕ ಮತ್ತು ಇತರ ಚಿಕಿತ್ಸೆಗಾಗಿ ಬಳಸಲಾಗುವ ನಿಷೇಧಿತ ಕೃತಕ ಒಪಿಯಾಯ್ಡ್‌ಗಳಾಗಿವೆ.
ಫ್ಲಶ್ ಮಾಡಬಹುದಾದ 17 ಔಷಧಿಗಳ ಪಟ್ಟಿ ಇಲ್ಲಿದೆ:
ಫೆಂಟಾನಿಲ್
ಫೆಂಟಾನಿಲ್ ಸಿಟ್ರೇಟ್
ಡಯಾಜಿಪಾಮ್
ಬುಪ್ರೆನಾರ್ಫಿನ್
ಬುಪ್ರೆನಾರ್ಫಿನ್ ಹೈಡ್ರೋಕ್ಲೋರೈಡ್
ಮಾರ್ಫಿನ್ ಸಲ್ಫೇಟ್
ಮೆಥಾಡೋನ್ ಹೈಡ್ರೋಕ್ಲೋರೈಡ್
ಹೈಡ್ರೊಮಾರ್ಫೋನ್ ಹೈಡ್ರೋಕ್ಲೋರೈಡ್
ಹೈಡ್ರೊಕೊಡೋನ್ ಬಿಟಾರ್ಟ್ರೇಟ್
ಟ್ಯಾಪೆಂಟಾಡಾಲ್
ಆಕ್ಸಿಕೊಡೋನ್ ಹೈಡ್ರೋಕ್ಲೋರೈಡ್
ಆಕ್ಸಿಕೊಡೋನ್
ಆಕ್ಸಿಮಾರ್ಫೋನ್ ಹೈಡ್ರೋಕ್ಲೋರೈಡ್
ಸೋಡಿಯಂ ಆಕ್ಸಿಬೇಟ್
ಟ್ರಾಮಾಡಾಲ್
ಮೀಥೈಲ್‌ಫೆನಿಡೇಟ್
ಮೆಪೆರಿಡಿನ್ ಹೈಡ್ರೋಕ್ಲೋರೈಡ್
ಈ ಔಷಧಿಗಳನ್ನು ಕಾಲಾವಧಿ ಮೀರಿದಾಗ ಅಥವಾ ಅಗತ್ಯವಿಲ್ಲದಿದ್ದಾಗ ಫ್ಲಶ್ ಮಾಡುವುದು ಸುರಕ್ಷಿತ. ಏಕೆಂದರೆ ಇವು ದುರುಪಯೋಗಗೊಂಡರೆ, ಪ್ರಾಣಿಗಳು ಅಥವಾ ಮಕ್ಕಳ ಕೈಗೆ ಸಿಕ್ಕರೆ ಅಪಾಯಕಾರಿಯಾಗಬಹುದು. ಈ ಮುಂಜಾಗ್ರತೆಯ ಕ್ರಮವು ಔಷಧಿಗಳು ತಪ್ಪು ಕೈಗಳಿಗೆ ಹೋಗದಂತೆ ಮತ್ತು ಉದ್ದೇಶಪೂರ್ವಕವಲ್ಲದ ಹಾನಿಯನ್ನು ತಡೆಯುವ ಗುರಿಯನ್ನು ಹೊಂದಿದೆ. ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯ ಪ್ರಕಾರ, ಈ ಔಷಧಿಗಳನ್ನು ಉದ್ದೇಶಿತ ವ್ಯಕ್ತಿಯಲ್ಲದವರು ಸೇವಿಸಿದರೆ, ಅಪಾಯ ಖಚಿತವಾಗಿದ್ದು, ಕೆಲವು ಸಂದರ್ಭಗಳಲ್ಲಿ ಇವುಗಳ ಒಂದು ಡೋಸ್ ಕೂಡ ಪ್ರಾಣಕ್ಕೆ ಎರವಾಗಬಹುದು.
ಮನೆಯಲ್ಲಿ, ಸಾಕುಪ್ರಾಣಿಗಳ ಸೇರಿದಂತೆ ಇತರರಿಗೆ ಅಪಾಯವಾಗದಂತೆ, ಬಳಕೆಯಾಗದ, ಕಾಲಾವಧಿ ಮೀರಿದ ಅಥವಾ ಅನಗತ್ಯ ಔಷಧಿಗಳನ್ನು ವಿಲೇವಾರಿ ಮಾಡುವಂತೆ ಔಷಧ ಸಂಸ್ಥೆ ಸಲಹೆ ನೀಡಿದೆ. ಮ್ಯಾಕ್ಸ್ ಹೆಲ್ತ್ ಕೇರ್‌ನ ನಿರ್ದೇಶಕಿ ದೇವರತಿ ಮಜುಂದಾರ್ ಪ್ರಕಾರ, CDSCO ಪಟ್ಟಿಮಾಡಿರುವ ಔಷಧಿಗಳು ಹೆಚ್ಚಾಗಿ ಮಾದಕವಸ್ತುಗಳಾಗಿದ್ದು, ಇವು ವ್ಯಸನಕ್ಕೆ ಕಾರಣವಾಗಬಹುದು ಮತ್ತು ದುರುಪಯೋಗಕ್ಕೆ ಒಳಗಾಗುವ ಸಾಧ್ಯತೆ ಹೊಂದಿವೆ.
ಪರಿಸರ ಸಂರಕ್ಷಣೆಗಾಗಿ ವೈಜ್ಞಾನಿಕ ವಿಲೇವಾರಿ
ಇತರ ಔಷಧಿಗಳ ವೈಜ್ಞಾನಿಕ ವಿಲೇವಾರಿಗಾಗಿ ಸಂಸ್ಥೆಯು “ಡ್ರಗ್ ಟೇಕ್ ಬ್ಯಾಕ್” ಅಭಿಯಾನಗಳನ್ನೂ ಶಿಫಾರಸು ಮಾಡಿದೆ. ಇದು ಪರಿಸರ ಮಾಲಿನ್ಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಔಷಧಿಗಳ ಅಸಮರ್ಪಕ ವಿಲೇವಾರಿಯಿಂದಾಗಿ ಅವು ನೀರಿನ ಮೂಲಗಳಿಗೆ ಸೇರಿಕೊಂಡು, ವಿವಿಧ ರೋಗಗಳಿಗೂ ಕಾರಣವಾಗುತ್ತವೆ.