ಬೆಂಗಳೂರು: ನೀವು ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ ಗೃಹ ಸಾಲ ಸೇರಿ ವಿವಿಧ ವೈಯಕ್ತಿಕ ಸಾಲ ಮಾಡಿದ್ದೀರಾ? ಹಾಗಾದರೆ, ನಿಮ್ಮ ಇಎಂಐ ಮೊತ್ತವು ಮುಂದಿನ ತಿಂಗಳಿನಿಂದಲೇ ಕಡಿಮೆಯಾಗಲಿದೆ. ಹೌದು, ವೈಯಕ್ತಿಕ ಸಾಲದ ಮೇಲಿನ ಬಡ್ಡಿದರದಲ್ಲಿ ಪಿಎನ್ ಬಿಯು 25 ಬೇಸಿಸ್ ಪಾಯಿಂಟ್ ಗಳನ್ನು ಇಳಿಕೆ ಮಾಡಿದೆ. ಇದರಿಂದಾಗಿ ಗೃಹ ಸಾಲ ಸೇರಿ ಹಲವು ಸಾಲಗಳ ಮೇಲಿನ ಮಾಸಿಕ ಇಎಂಐ ಹೊರೆ ಕಡಿಮೆಯಾಗಲಿದೆ.
ಗೃಹಸಾಲದ ಮೇಲಿನ ಬಡ್ಡಿಯು ಇದುವರೆಗೆ ಶೇ.8.40ರಷ್ಟು ಇತ್ತು. ಈಗ ಅದು ಶೇ.8.15ರಷ್ಟು ಆಗಲಿದೆ. ಇನ್ನು, ಕಾರು ಖರೀದಿಸಲು ಮಾಡುವ ಸಾಲಕ್ಕೆ ಬಡ್ಡಿದರವನ್ನು ಶೇ.8.5ಕ್ಕೆ ಇಳಿಸಿದೆ. ಶಿಕ್ಷಣಕ್ಕಾಗಿ ಮಾಡುವ ಸಾಲಕ್ಕೆ ಶೇ.7.85ರಷ್ಟು ಬಡ್ಡಿ ವಿಧಿಸುತ್ತದೆ. ಒಂದು ಲಕ್ಷ ರೂ. ಗೃಹ ಸಾಲಕ್ಕೆ ಕನಿಷ್ಠ ಇಎಂಐ 744 ರೂ. ಆದರೆ, ಕಾರಿಗಾಗಿ ಮಾಡುವ ಸಾಲಕ್ಕೆ ಲಕ್ಷ ರೂ.ಗೆ 1,240 ರೂಪಾಯಿಯನ್ನು ಮಾಸಿಕ ಇಎಂಐ ಪಾವತಿಸಬೇಕಾಗುತ್ತದೆ.
ಕಳೆದ ಫೆಬ್ರವರಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ರೆಪೊ ದರವನ್ನು ಕಡಿತಗೊಳಿಸಿದೆ. ರೆಪೊ ದರವನ್ನು ಶೇ.6.5ರಿಂದ ಶೇ.6.25ಕ್ಕೆ ಇಳಿಕೆ ಮಾಡಿದೆ. ಹಾಗಾಗಿ, ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಕೂಡ ಬಡ್ಡಿದರವನ್ನುಇಳಿಕೆ ಮಾಡುತ್ತಿವೆ. ಕೆಲ ದಿನಗಳ ಹಿಂದೆಯೂ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ ಬಿಐ) ಕೂಡ ಶೇ.0.25ರಷ್ಟು ಬಡ್ಡಿದರವನ್ನು ಇಳಿಕೆ ಮಾಡಿತ್ತು.