ಬೆಂಗಳೂರು: ಗ್ರಾಹಕರನ್ನು ಸೆಳೆಯಲು ಬ್ಯಾಂಕುಗಳು ಆಗಾಗ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಲೇ ಇರುತ್ತವೆ. ಇದಕ್ಕೆ ನಿದರ್ಶನ ಎಂಬಂತೆ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಈಗ ಹೊಸ ಠೇವಣಿ ಯೋಜನೆಯನ್ನು ಜಾರಿಗೆ ತಂದಿದೆ. ಹೌದು, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾವು ‘Union Wellness Deposit’ ಎಂಬ ಠೇವಣಿ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಬ್ಯಾಂಕಿನಲ್ಲಿ ಠೇವಣಿ ಇರಿಸಿದರೆ 5 ಲಕ್ಷ ರೂಪಾಯಿವರೆಗೆ ಆರೋಗ್ಯ ವಿಮೆ ನೀಡಲಿದೆ.
ಗ್ರಾಹಕರು ಯೂನಿಯನ್ ಬ್ಯಾಂಕ್ ಇಂಡಿಯಾದಲ್ಲಿ10 ಲಕ್ಷ ರೂಪಾಯಿಯಿಂದ 3 ಕೋಟಿ ರೂಪಾಯಿವರೆಗೆ ಠೇವಣಿ ಇರಿಸಬಹುದಾಗಿದೆ. ಒಂದು ವರ್ಷ ಅಥವಾ 365 ದಿನಗಳ ನಿಶ್ಚಿತ ಠೇವಣಿ ಇದಾಗಿದ್ದು, ಇಷ್ಟು ದಿನ ಇರಿಸಿದರೆ 5 ಲಕ್ಷ ರೂಪಾಯಿವರೆಗಿನ ಆರೋಗ್ಯ ವಿಮೆ ದೊರೆಯಲಿದೆ. ಅಂದರೆ, 5 ಲಕ್ಷ ರೂ.ವರೆಗೆ ಉಚಿತವಾಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ. ಅಷ್ಟೇ ಅಲ್ಲ, ಠೇವಣಿ ಇರಿಸುವ ಮೊತ್ತಕ್ಕೆ ಶೇ.6.75ರಷ್ಟು ಬಡ್ಡಿಯೂ ದೊರೆಯಲಿದೆ.
ಸುರಕ್ಷಿತವಾದ ಠೇವಣಿ ಇರಬೇಕು, ನಿಯಮಿತ ರಿಟರ್ನ್ಸ್ ದೊರೆಯಬೇಕು ಹಾಗೂ ಆರೋಗ್ಯ ವಿಮೆಯೂ ದೊರೆಯಬೇಕು ಎಂಬುವವರಿಗೆ ಇದು ಒಳ್ಳೆಯ ಯೋಜನೆ ಎಂದು ಹೇಳಲಾಗುತ್ತಿದೆ. 18-60 ವರ್ಷದವರು ಈ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಇನ್ನು, ಹಿರಿಯ ನಾಗರಿಕರಿಗೆ ವಿಶೇಷ ಆಫರ್ ನೀಡಲಾಗಿದ್ದು, ಹಿರಿಯ ನಾಗರಿಕರು ಇರಿಸುವ ಠೇವಣಿ ಮೊತ್ತಕ್ಕೆ ಶೇ.0.50ರಷ್ಟು ಹೆಚ್ಚುವರಿ ರಿಟರ್ನ್ಸ್ ದೊರೆಯಲಿದೆ. ಅಂದರೆ, ಹಿರಿಯ ನಾಗರಿಕರ ಠೇವಣಿಗೆ ಶೇ.7.25ರಷ್ಟು ಬಡ್ಡಿ ದೊರೆಯಲಿದೆ.
ಕಳೆದ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ನಿವ್ವಳ ಲಾಭದಲ್ಲಿ ಶೇ.50ರಷ್ಟು ಏರಿಕೆಯಾಗಿದೆ. ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಬ್ಯಾಂಕ್ 4,985 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಇದರ ಬೆನ್ನಲ್ಲೇ, ಹೊಸ ಠೇವಣಿ ಯೋಜನೆಯನ್ನು ಘೋಷಣೆ ಮಾಡಿದೆ.