ಬೆಂಗಳೂರು: ಕರ್ನಾಟಕದ ಗೃಹ ಇಲಾಖೆಯನ್ನು ನಡೆಸಲು ಆಗದಿದ್ದರೆ ರಾಜ್ಯದ ಗೃಹ ಸಚಿವರು ರಾಜೀನಾಮೆ ಕೊಡಲಿ ಎಂದು ಜಿ.ಪರಮೇಶ್ವರ್ ವಿರುದ್ಧ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಸೋಮವಾರ ʼಗೊತ್ತಿಲ್ಲ ಸಚಿವರೇ ರಾಜೀನಾಮೆ ಕೊಟ್ಟು ನಡೆಯಿರಿ ಪೋಸ್ಟರ್ʼ ಅನ್ನು ಅವರು ಬಿಡುಗಡೆಗೊಳಿಸಿ, ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಛಲವಾದಿ, ಗೃಹ ಸಚಿವರೇ ಸಬೂಬುಗಳನ್ನು ಹೇಳಿಕೊಂಡು ಎಷ್ಟು ದಿನ ಈ ರಾಜ್ಯವನ್ನು ಹಾಳು ಮಾಡುತ್ತೀರಿ? ನೀವು ಅಧಿಕಾರ ಬಿಟ್ಟು ಕೊಡಿ. ಬೇರೆ ಯಾರಿಗಾದರೂ ತಾಕತ್ತಿದ್ದರೆ ಆಡಳಿತ ನಡೆಸಲಿ ಎಂದು ಒತ್ತಾಯಿಸಿದ್ದಾರೆ.
ಡಾ. ಪರಮೇಶ್ವರ್ ಅವರೇ, ಇದು ನಿಮ್ಮ ಅಸಹಾಯಕತೆಯೇ? ಅಥವಾ ಬೇರೆಯವರು ನಿಮಗೆ ಕೆಟ್ಟ ಹೆಸರು ತರಲು ನಿಮ್ಮ ವಿರುದ್ಧವಾಗಿ ಮಾಡಿದ ಷಡ್ಯಂತ್ರವೇ ಎಂದು ಹೇಳಿ ಎಂದು ಆಗ್ರಹಿಸಿದರು. ರಾಜ್ಯದಲ್ಲಿ ಡ್ರಗ್ ಮಾಫಿಯಾ ಸಂಚಲನವನ್ನೇ ಸೃಷ್ಟಿ ಮಾಡಿದೆ. ಈ ಮಾಫಿಯಾಕ್ಕೆ ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ಅವಕಾಶ ಕಲ್ಪಿಸುವ ಮೂಲಕ ಕಾಂಗ್ರೆಸ್ ಸರ್ಕಾರವೇ ಡ್ರಗ್ ಸರ್ಕಾರವಾಗಿದೆ. ಕರ್ನಾಟಕದಲ್ಲಿ ಡ್ರಗ್ ಕಾರ್ಖಾನೆ ತಲೆ ಎತ್ತಿರುವುದು ಹೊರಕ್ಕೆ ಬರುತ್ತಿದೆ ಎಂದು ಆರೋಪಿಸಿದ್ದಾರೆ.
ಸರ್ಕಾರವೇ ಡ್ರಗ್ ದಂಧೆ ಮಾಡಿಸುತ್ತಿದೆಯೇ ಎಂದು ಅನುಮಾನ ಬರುತ್ತಿದೆ. ಡ್ರಗ್ ಪೆಡ್ಲರ್‌ಗಳನ್ನು ನಮ್ಮ ಸರ್ಕಾರ ಹಿಡಿಯುವುದಿಲ್ಲ. ಮೈಸೂರು, ಬೆಂಗಳೂರಿನ 3 ಕಡೆ ಮಾದಕವಸ್ತು ಕಾರ್ಖಾನೆಗಳ ಮೇಲೆ ಮಹಾರಾಷ್ಟ್ರದ ಪೊಲೀಸರು ದಾಳಿ ಮಾಡಬೇಕಾಯಿತು ಎಂದು ದೂರಿದರು. ರಾಜ್ಯದ ಗೃಹ ಇಲಾಖೆ ಸತ್ತು ಹೋಗಿದೆಯೇ? ಬೇಹುಗಾರಿಕಾ ದಳ, ನಮ್ಮ ಪೊಲೀಸರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು. ಮಹಾರಾಷ್ಟ್ರ ಪೊಲೀಸರು ಇದನ್ನು ಪತ್ತೆ ಹಚ್ಚಿದ ಬಳಿಕ ಇಲ್ಲಿನ ಕಾಂಗ್ರೆಸ್ ಸರ್ಕಾರ ನಾವು ಹಿಡಿದಿದ್ದೇವೆ ಎಂದು ತಿಳಿಸಿ, ಘನ ಕಾರ್ಯ ಮಾಡಿದಂತೆ ವರ್ತಿಸುತ್ತದೆ ಎಂದು ಕಿಡಿಕಾರಿದ್ದಾರೆ.
ಮಾದಕವಸ್ತು ಮಾರಾಟ ಅಡ್ಡೆಗಳಿಗೆ ಸರ್ಕಾರದ ಕುಮ್ಮಕ್ಕಿದೆ. ಗಂಧದ ನಾಡು ಗಾಂಜಾ ಬೀಡಾಗಿದೆ. ವಿದ್ಯಾರ್ಥಿಗಳು ಕಾಲೇಜಿಗೆ ಹೋಗಬೇಕೇ ಬೇಡವೇ ಎಂಬ ಪರಿಸ್ಥಿತಿ ಬಂದಿದೆ. ಆ್ಯಂಟಿ ನಕ್ಸಲ್ ದಳದ ಕೆಲಸ ಮುಗಿದು ಹೋಗಿದೆ. ಅದನ್ನು ಆ್ಯಂಟಿ ಡ್ರಗ್ಸ್ ದಳವಾಗಿ ಮಾಡಿ ಮಾದಕವಸ್ತು ಜಾಲದ ಸಂಪೂರ್ಣ ಮೂಲೋತ್ಪಾಟನೆ ಮಾಡಿ ಎಂದು ಒತ್ತಾಯಿಸಿದರು. ಒಟ್ಟಾರೆ ಕಾಂಗ್ರೆಸ್ ಸರ್ಕಾರವು ಈ ರಾಜ್ಯವನ್ನು ಸಂಪೂರ್ಣ ಹದಗೆಡಿಸಿದೆ ಎಂದು ಆಕ್ಷೇಪಿಸಿದ ಅವರು, ಮುಖ್ಯಮಂತ್ರಿಗಳು ತಕ್ಷಣ ಕಾರ್ಯೋನ್ಮುಖವಾಗಲಿ. ಮುಖ್ಯಮಂತ್ರಿಗಳು ಅಥವಾ ಗೃಹ ಸಚಿವರು ರಾಜೀನಾಮೆ ಕೊಡಬೇಕೇ ಎಂದು ಅವರೇ ತೀರ್ಮಾನಿಸಲಿ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಹೊಸ ವರ್ಷಾಚರಣೆ | ರಾಜ್ಯಧಾನಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸಿಎಂ ಸೂಚನೆ



















