ರಾಜ್ಯದಲ್ಲಿ ಕೆಲವೊಂದಷ್ಟು ವರ್ಷದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅಚ್ಚರಿ ಪಡುವಂತಹ ಅಥವಾ ಹೇಳಿಕೊಳ್ಳುವಂತಹ ರಿಸಲ್ಟ್ ಬಂದಿಲ್ಲ. ಹೀಗಾಗಿ ಈ ಬಗ್ಗೆ ಈಗ ಶಿಕ್ಷಣ ಇಲಾಖೆ ಗಂಬೀರ ನಿರ್ಧಾರ ಕೈಗೊಂಡಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕಡಿಮೆ ಫಲಿತಾಂಶ ಪಡೆದಿರುವ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮೇಲೆ ಕ್ರಮಕ್ಕೆ ಶಿಕ್ಷಣ ಇಲಾಖೆ ಮುಂದಾಗಿದೆ.
2025-2026 ನೇ ಸಾಲಿನ ಫಲಿತಾಂಶದ ಬಗ್ಗೆ ಸಿಎಂ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದರು.
ಹೀಗಾಗಿ ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡಿದ್ದು, ಮುಂದಿನ ವರ್ಷ ಶೇ.75ರಷ್ಟು ಫಲಿತಾಂಶದ ಟಾರ್ಗೆಟ್ ನೀಡಿದ್ದಾರೆ. ಅಲ್ಲದೇ ಶೇ. 60ಕ್ಕಿಂತ ಕಡಿಮೆ ಫಲಿತಾಂಶ ಬಂದಿರುವ ಸರ್ಕಾರಿ ಶಾಲಾ ಮುಖ್ಯ ಶಿಕ್ಷಕರಿಗೆ ಇಲಾಖೆ ನೋಟಿಸ್ ಜಾರಿ ಮಾಡಿದೆ. ಶಾಲೆಗಳಿಗೆ ಎಲ್ಲಾ ಸೌಲಭ್ಯ ನೀಡಿದರೂ ಫಲಿತಾಂಶ ಕಡಿಮೆ ಬಂದಿದೆ. ನಿಮ್ಮ ಮೇಲೆ ನಾವ್ಯಾಕೆ ಕ್ರಮ ತೆಗೆದುಕೊಳ್ಳಬಾರದು ಅಂತ ನೋಟಿಸ್ ಜಾರಿ ಮಾಡಿದೆ. ಫಲಿತಾಂಶ ಉತ್ತಮಗೊಳಿಸುವ ನಿಟ್ಟಿನಲ್ಲಿ ನೀವು ಕ್ರಮ ತೆಗೆದುಕೊಂಡಿಲ್ಲ. ಇದು ಕರ್ತವ್ಯ ಲೋಪ ಅಲ್ಲವೇ ಅಂತ ಪ್ರಶ್ನಿಸಿ, ಉತ್ತರ ಕೊಡುವಂತೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
ನೋಟಿಸ್ ಗೆ ಉತ್ತರ ಕೊಟ್ಟ ಬಳಿಕ ಅಂತಹ ಶಾಲಾ ಮುಖ್ಯ ಶಿಕ್ಷಕರ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆಯನ್ನು ನೀಡಲಾಗುವಂತೆ ನೋಟಿಸ್ನಲ್ಲಿ ಉಲ್ಲೇಖಿಸಿದೆ. ಕೇವಲ ಸರ್ಕಾರಿ ಶಾಲೆ ಮಾತ್ರವಲ್ಲದೇ ಖಾಸಗಿ, ಅನುದಾನಿತ ಶಾಲೆಗಳ ಮೇಲೆ ಕಠಿಣ ಕ್ರಮಕ್ಕೆ ಮುಂದಾಗಿದೆ. ಶೇ. 60ಕ್ಕಿಂತ ಕಡಿಮೆ ಫಲಿತಾಂಶ ಬಂದಿರುವ ಶಾಲಾ ಶಿಕ್ಷಕರು, ಸಂಸ್ಥೆಗಳ ಅನುದಾನವನ್ನೇ ಕಡಿತ ಮಾಡುವ ಆದೇಶವನ್ನು ಶಿಕ್ಷಣ ಇಲಾಖೆ ಮಾಡಿದೆ.
ಪರೀಕ್ಷೆಯಲ್ಲಿ ಗಳಿಸಿದ ವಿಷಯವಾರು ಫಲಿತಾಂಶ ನೋಡಿ ಶಿಕ್ಷಕರ ವಾರ್ಷಿಕ ಬಡ್ತಿ, ವೇತನಾನುದಾನ ತಡೆಗೆ ಸರ್ಕಾರ ನಿರ್ಧಾರ ಮಾಡಿದೆ. ಬಿಇಓಗಳು ಎಲ್ಲವನ್ನೂ ಪರಿಶೀಲಿಸಿ ಆಯುಕ್ತರಿಗೆ ವರದಿ ನೀಡಬೇಕು ಎಂದು ಸೂಚಿಸಲಾಗಿದೆ.