ಬೆಂಗಳೂರು: ರಾಜ್ಯದಲ್ಲಿ ಕಳೆದ ಸುಮಾರು ಮೂರ್ನಾಲ್ಕು ವರ್ಷಗಳಿಂದ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದಿಲ್ಲ. ಇದಕ್ಕೆ ಹಣಕಾಸು ಆಯೋಗ ಗರಂ ಆಗಿದೆ. ಹೀಗಾಗಿ ಕೇಂದ್ರ ಸರ್ಕಾರದ 16ನೇ ಆಯೋಗ ಷರತ್ತು ಇಟ್ಟಿದೆ.
5 ವರ್ಷಗಳಿಗೊಮ್ಮೆ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಬೇಕು. ಪ್ರತಿ 5 ವರ್ಷಕ್ಕೊಮ್ಮೆ ರಾಜ್ಯ ಹಣಕಾಸು ಆಯೋಗ ರಚನೆ ಆಗಬೇಕು. ಇಲ್ಲವಾದರೆ, ಅನುದಾನ ತಡೆ ಹಿಡಿಯಲಾಗುತ್ತದೆ ಎಂದು ಆಯೋಗ ಹೇಳಿದೆ.
ಸರಿಯಾದ ಸಮಯಕ್ಕೆ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವುದು ರಾಜ್ಯ ಚುನಾವಣ ಆಯೋಗದ ಕೆಲಸ. ಅದಕ್ಕೆ ಅವಕಾಶ ಮಾಡಿಕೊಡಬೇಕಾದ ಜವಾಬ್ದಾರಿ ರಾಜ್ಯ ಸರ್ಕಾರದ್ದು. ಪ್ರತಿ 5 ವರ್ಷಕ್ಕೊಮ್ಮೆ ರಾಜ್ಯ ಹಣಕಾಸು ಆಯೋಗ ರಚನೆ ಮಾಡುವ ಹೊಣೆ ರಾಜ್ಯ ಸರ್ಕಾರದ್ದಿರುತ್ತದೆ. ಹೀಗಾಗಿ ಸರಿಯಾದ ಸಮಯಕ್ಕೆ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯದಿದ್ದರೆ ಹಾಗೂ ರಾಜ್ಯ ಹಣಕಾಸು ಆಯೋಗ ರಚನೆ ಆಗದಿದ್ದರೆ ಅದು ರಾಜ್ಯ ಸರ್ಕಾರದ ನಿರ್ಲಕ್ಷ್ಯವಾಗುತ್ತದೆ. ಹೀಗಾಗಿ ರಾಜ್ಯ ಸರ್ಕಾರಕ್ಕೆ ಬರಬೇಕಾದ ಅನುದಾನವನ್ನು ತಡೆ ಹಿಡಿಯಬೇಕೇ ಹೊರತು, ಸ್ಥಳೀಯ ಸಂಸ್ಥೆಗಳ ಅನುದಾನ ತಡೆ ಹಿಡಿಯಬಾರದು ಎಂದು ರಾಜ್ಯ ಹಣಕಾಸು ಆಯೋಗವು ಕೇಂದ್ರ ಹಣಕಾಸು ಆಯೋಗದ ಮುಂದೆ ವಾದಿಸಿದೆ.
ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯದ ಹಿನ್ನೆಲೆಯಲ್ಲಿ 15ನೇ ಹಣಕಾಸು ಆಯೋಗದಿಂದ ಬರಬೇಕಿದ್ದ 2,100 ಕೋಟಿ ರೂ. ಅನುದಾನವನ್ನು ತಡೆ ಹಿಡಿಯಲಾಗಿದೆ. ಆದರೆ, ರಾಜ್ಯ ಸರ್ಕಾರಕ್ಕೆ ಬರಬೇಕಾದ ಅನುದಾನವನ್ನು ಮಾತ್ರ ತಡೆ ಹಿಡಿದಿಲ್ಲ. ಹೀಗಾಗಿ ರಾಜ್ಯ ಹಣಕಾಸು ಆಯೋಗವು ರಾಜ್ಯ ಸರ್ಕಾರದ ಅನುದಾನ ತಡೆ ಹಿಡಿದರೆ, ಆಗ ಎಚ್ಚೆತ್ತುಕೊಂಡು ಕಾಲ ಕಾಲಕ್ಕೆ ಚುನಾವಣೆ ನಡೆಸುತ್ತದೆ. ಅಲ್ಲದೇ, ರಾಜ್ಯ ಚುನಾವಣಾ ಆಯೋಗವನ್ನೂ ರಚಿಸುತ್ತದೆ. ಚುನಾವಣೆ ನಡೆಯದ ರಾಜ್ಯಗಳಿಗೆ ರಾಜ್ಯ ಸರಕಾರಕ್ಕೆ ಬರಬೇಕಿದ್ದ ಅನುದಾನ ತಡೆಹಿಡಿಯಿರಿ ಎಂದು 16ನೇ ಹಣಕಾಸು ಆಯೋಗದ ಮುಂದೆ ರಾಜ್ಯ 5ನೇ ಹಣಕಾಸು ಆಯೋಗ ಬೇಡಿಕೆ ಮಂಡಿಸಿದೆ. ಎತ್ತಿಗೆ ಜ್ವರ ಬಂದರೆ, ಎಮ್ಮೆಗೆ ಬರೆ ಏಕೆ? ಎಂದು ರಾಜ್ಯ ಆಯೋಗ ಪ್ರಶ್ನಿಸಿದೆ. ಇನ್ನಾದರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಚುನಾವಣೆ ನಡೆಸಲಿದೆಯೇ ಕಾಯ್ದು ನೋಡಬೇಕಿದೆ.