ಲಕ್ನೋ: ಉತ್ತರ ಪ್ರದೇಶದಲ್ಲಿ ಎಲ್ಲಾ ಧರ್ಮದ ಜನರು ಸುರಕ್ಷಿತರಾಗಿದ್ದಾರೆ. ಇಲ್ಲಿ ಹಿಂದೂಗಳು ಸುರಕ್ಷಿತವಾಗಿದ್ದರೆ, ಮುಸ್ಲಿಮರೂ ಸುರಕ್ಷಿತವಾಗಿರುತ್ತಾರೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(Yogi Adityanath) ಹೇಳಿದ್ದಾರೆ.
ಸುದ್ದಿಸಂಸ್ಥೆ ಎಎನ್ಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ನಾನು ಒಬ್ಬ “ಯೋಗಿ”. ಯೋಗಿಯಾದವರು ಪ್ರತಿಯೊಬ್ಬರ ಸಂತೋಷವನ್ನೂ ಬಯಸುತ್ತಾರೆ ಎಂದೂ ಹೇಳಿದ್ದಾರೆ.
ಇದೇ ವೇಳೆ ಹಿಂದೂಗಳ ಧಾರ್ಮಿಕ ಸಹಿಷ್ಣುತೆಯ ಬಗ್ಗೆ ವಿವರಿಸಿದ ಅವರು, “100 ಹಿಂದೂ ಕುಟುಂಬಗಳು ವಾಸಿಸುವ ಕಡೆ ಒಂದು ಮುಸ್ಲಿಂ ಕುಟುಂಬವಿದ್ದರೂ ಅದು ಸುರಕ್ಷಿತವಾಗಿರುತ್ತದೆ. ಆ ಕುಟುಂಬವು ಎಲ್ಲಾ ಧಾರ್ಮಿಕ ಪದ್ಧತಿಗಳನ್ನು ಆಚರಿಸುವ ಸ್ವಾತಂತ್ರ್ಯವನ್ನು ಹೊಂದಿರುತ್ತದೆ. ಆದರೆ 100 ಮುಸ್ಲಿಂ ಕುಟುಂಬಗಳಿರುವ ಕಡೆ 50 ಹಿಂದೂಗಳು ಸುರಕ್ಷಿತವಾಗಿರಲು ಸಾಧ್ಯವೇ? ಖಂಡಿತಾ ಇಲ್ಲ. ಇದಕ್ಕೆ ಬಾಂಗ್ಲಾದೇಶವೇ ಉದಾಹರಣೆ. ಅದಕ್ಕೂ ಮೊದಲು ಪಾಕಿಸ್ತಾನ ಒಂದು ಉದಾಹರಣೆಯಾಗಿತ್ತು. ಅಫ್ಘಾನಿಸ್ತಾನದಲ್ಲಿ ಏನಾಯಿತು? ಹೊಗೆ ಇದ್ದ ಕಡೆ ಬೆಂಕಿಯಾಡುತ್ತದೆ. ಯಾರಿಗಾದರೂ ನಾವು ಹೊಡೆಯುತ್ತೇವೆ ಎಂದರೆ, ನಾವೂ ಹೊಡೆಸಿಕೊಳ್ಳುತ್ತೇವೆ ಎಂದು ಗೊತ್ತಿರಬೇಕಾಗುತ್ತದೆ’ ಎಂದೂ ಅವರು ಹೇಳಿದ್ದಾರೆ.
ಉತ್ತರಪ್ರದೇಶದಲ್ಲಿ 2017ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯವು ಯಾವುದೇ ಕೋಮು ಗಲಭೆಗಳಿಗೆ ಸಾಕ್ಷಿಯಾಗಿಲ್ಲ ಎಂದೂ ಅವರು ಹೇಳಿದ್ದಾರೆ. ಉತ್ತರ ಪ್ರದೇಶದಲ್ಲಿ ಮುಸ್ಲಿಮರು ಸುರಕ್ಷಿತರಾಗಿದ್ದಾರೆ. ಹಿಂದೂಗಳು ಸುರಕ್ಷಿತವಾಗಿದ್ದರೆ, ಅವರೂ ಸುರಕ್ಷಿತರಾಗಿರುತ್ತಾರೆ. 2017ಕ್ಕಿಂತ ಮುಂಚೆ ಉತ್ತರಪ್ರದೇಶದಲ್ಲಿ ಗಲಭೆಗಳು ನಡೆದಾಗ, ಹಿಂದೂ ಅಂಗಡಿಗಳು ಸುಟ್ಟುಹೋದರೆ, ಮುಸ್ಲಿಂ ಅಂಗಡಿಗಳೂ ಸುಟ್ಟುಹೋಗುತ್ತಿದ್ದವು. ಹಿಂದೂಗಳ ಮನೆಗಳು ಉರಿದರೆ, ಮುಸ್ಲಿಮರ ಮನೆಗಳೂ ಉರಿಯುತ್ತಿದ್ದವು. ಆದರೆ 2017ರ ನಂತರ, ಗಲಭೆಗಳೇ ನಿಂತುಹೋದವು” ಎಂದಿದ್ದಾರೆ.
“ನಾನು ಒಬ್ಬ ಸಾಮಾನ್ಯ ನಾಗರಿಕ. ಉತ್ತರ ಪ್ರದೇಶದ ಜನಸಾಮಾನ್ಯ ಪ್ರಜೆ. ನಾನು ಎಲ್ಲರ ಸಂತೋಷವನ್ನು ಬಯಸುವಂಥ ಯೋಗಿ. ಎಲ್ಲರ ಬೆಂಬಲ ಮತ್ತು ಅಭಿವೃದ್ಧಿಯಲ್ಲಿ ನಾನು ನಂಬಿಕೆ ಇಟ್ಟಿದ್ದೇನೆ. ಸನಾತನ ಧರ್ಮವು ವಿಶ್ವದ ಅತ್ಯಂತ ಪ್ರಾಚೀನ ಧರ್ಮವಾಗಿದೆ ಮತ್ತು ಹಿಂದೂ ಆಡಳಿತಗಾರರು ಇತರರ ಮೇಲೆ ಪ್ರಭುತ್ವವನ್ನು ಸ್ಥಾಪಿಸಿದ ಉದಾಹರಣೆಗಳು ವಿಶ್ವದ ಇತಿಹಾಸದಲ್ಲೇ ಇಲ್ಲ” ಎಂದೂ ಅವರು ಹೇಳಿದ್ದಾರೆ. “ಸನಾತನ ಧರ್ಮವು ವಿಶ್ವದ ಅತ್ಯಂತ ಪ್ರಾಚೀನ ಧರ್ಮ ಮತ್ತು ಸಂಸ್ಕೃತಿಯಾಗಿದೆ. ಅದರ ಹೆಸರು ನೋಡಿದರೇ ಅದು ಗೊತ್ತಾಗುತ್ತದೆ. ಸನಾತನ ಧರ್ಮದ ಅನುಯಾಯಿಗಳು ಎಂದೂ ಇತರರನ್ನು ತಮ್ಮ ಧರ್ಮಕ್ಕೆ ಮತಾಂತರಿಸಿಲ್ಲ” ಎಂದೂ ಯೋಗಿ ಹೇಳಿದ್ದಾರೆ.
ರಾಹುಲ್ ಗಾಂಧಿಯಂಥ “ನಮೂನೆ”ಯಿಂದ ಬಿಜೆಪಿ ಹಾದಿ ಸುಗಮ
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕುರಿತೂ ಮಾತನಾಡಿರುವ ಯೋಗಿ, ರಾಹುಲ್ ಗಾಂಧಿಯಂಥ “ನಮೂನೆ”ಗಳು ಬಿಜೆಪಿಗೆ ಲಾಭ ಮಾಡಿಕೊಡುತ್ತವೆ ಎಂದು ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡೆಸಿದ ಭಾರತ್ ಜೋಡೋ ಎಂಬ ರಾಷ್ಟ್ರವ್ಯಾಪಿ ಅಭಿಯಾನವು ವಾಸ್ತವದಲ್ಲಿ “ಭಾರತ್ ಥೋಡೋ ಅಭಿಯಾನವಾಗಿತ್ತು. ಅವರು ಭಾರತದ ಹೊರಗೆ ವಿದೇಶಗಳಿಗೆ ಹೋಗಿ ಭಾರತವನ್ನು ಟೀಕಿಸುತ್ತಾರೆ. ದೇಶವು ಅವರ ಸ್ವಭಾವ ಮತ್ತು ಉದ್ದೇಶಗಳನ್ನು ಅರ್ಥಮಾಡಿಕೊಂಡಿದೆ. ರಾಹುಲ್ ಗಾಂಧಿ ಅವರಂತಹ ಕೆಲವು ನಮೂನೆಗಳು ಇರಬೇಕು. ಆಗ ಬಿಜೆಪಿಯ ಹಾದಿ ಸುಗಮವಾಗುತ್ತದೆ ಎಂದೂ ಅವರು ಹೇಳಿದ್ದಾರೆ.
ಇದೇ ವೇಳೆ, ಅಯೋಧ್ಯೆ ವಿವಾದವು ವಿವಾದವಾಗಿಯೇ ಉಳಿಯಬೇಕೆಂದು ಕಾಂಗ್ರೆಸ್ ಬಯಸಿತ್ತು ಎಂದೂ ಅವರು ಆರೋಪಿಸಿದ್ದಾರೆ. “ಕಾಂಗ್ರೆಸ್ ತ್ರಿವಳಿ ತಲಾಖ್ ಅನ್ನು ಏಕೆ ರದ್ದುಗೊಳಿಸಲಿಲ್ಲ? ಕಾಂಗ್ರೆಸ್ ಏಕೆ ಇಷ್ಟೊಂದು ಹೆಮ್ಮೆ ಮತ್ತು ದೈವಿಕ ಭಾವದಿಂದ ಕುಂಭಮೇಳವನ್ನು ಉತ್ತೇಜಿಸಲಿಲ್ಲ? ದೇಶದಲ್ಲಿ ವಿಶ್ವದರ್ಜೆಯ ಮೂಲಸೌಕರ್ಯಗಳನ್ನು ಒದಗಿಸಲು ಕಾಂಗ್ರೆಸ್ ಏಕೆ ವಿಫಲವಾಯಿತು? ಎಂದೂ ಯೋಗಿ ಕಾಂಗ್ರೆಸ್ ಗೆ ಪ್ರಶ್ನೆಗಳ ಸುರಿಮಳೆ ಸುರಿದಿದ್ದಾರೆ.