ಬೆಂಗಳೂರು: ಸಚಿವರೆಲ್ಲರೂ ರಾಜೀನಾಮೆ ನೀಡುತ್ತಾ ಹೋದರೆ ಇಡೀ ಮಂತ್ರಿ ಮಂಡಲವೇ ಖಾಲಿಯಾಗುತ್ತದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಬಿಜೆಪಿಗೆ ಹೇಳಿದ್ದಾರೆ.
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಬಿಜೆಪಿ ಒತ್ತಾಯಿಸುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಅವರು, ಆರೋಪಗಳು ಬಂದ ಕೂಡಲೇ ಎಲ್ಲವನ್ನೂ ಸಿಬಿಐ ತನಿಖೆಗೆ ಕೇಳುತ್ತಾರೆ. ಮೊದಲು ಈ ಬಗ್ಗೆ ರಾಜ್ಯ ಸರ್ಕಾರದಿಂದ ತನಿಖೆ ಆಗಬೇಕು. ಆಮೇಲೆ ಅವರು ಹೇಳಿದಂತೆ ಬೇರೆ ರೀತಿಯ ತನಿಖೆಯ ಕುರಿತು ನೋಡೋಣ ಎಂದಿದ್ದಾರೆ.
ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೇಳೋದು ಎಷ್ಟು ಸರಿ ಅನ್ನೋದು ಬಿಜೆಪಿಯವರೇ ಯೋಚಿಸಬೇಕು. ಈಶ್ವರಪ್ಪ ಪ್ರಕರಣವನ್ನು ಸ್ವತಃ ಗುತ್ತಿಗೆದಾರ ಸಂತೋಷ್ ಅವರೇ ಹೇಳಿದ್ದು. ಕೆಲಸ ಮಾಡಿದ್ದೀನಿ, ಬಿಲ್ ಕೊಡಿ ಅಂತ ನೂರಾರು ಬಾರಿ ಭೇಟಿ ಮಾಡಿದ್ದರೂ ಅವರ. ಆನಂತರ ಹೆಸರನ್ನು ಬರೆದು ಆತ್ಮಹತ್ಯೆ ಮಾಡಿಕೊಂಡರು. ಈಶ್ವರಪ್ಪ ಕೇಸ್ ಹಾಗೂ ಸಚಿನ್ ಆತ್ಮಹತ್ಯೆ ಕೇಸ್ ಗೆ ವ್ಯತ್ಯಾಸ ಇದೆ ಎಂದಿದ್ದಾರೆ.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಸಿ.ಟಿ ರವಿ ಪ್ರಕರಣದ ಬಗ್ಗೆ ಮಾತನಾಡಿ, ವಿಧಾನಸಭೆ ಪೊಲೀಸರಿಗೆ ಅವರದ್ದೇ ಆದ ಪ್ರತ್ಯೇಕ ಕಾನೂನು ಇದೆ. ಹೇಗೆ ತನಿಖೆ ಮಾಡ್ತಾರೆ ಅವರಿಗೆ ಬಿಟ್ಟಿದ್ದು, ನನಗೆ ಹೆಚ್ಚಿನ ಮಾಹಿತಿ ಇಲ್ಲ ಎಂದಿದ್ದಾರೆ.