ರಾಮನಗರ : ಇತ್ತೀಚೆಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಚನ್ನಪಟ್ಟಣದಲ್ಲಿ ಬೀಡು ಬಿಟ್ಟಿದ್ದರು. ಅವರೇ ಸ್ಪರ್ಧೆ ಮಾಡಿ ಕುಬೇರ ಮೂಲೆಯಿಂದ ಗೆದ್ದು, ಸಿಎಂ ಚೇರ್ ಏರುವ ಕನಸು ಕಾಣುತ್ತಿದ್ದಾರೆ ಎಂದೇ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದರು. ಹಾಗೆಯೇ ಡಿಸಿಎಂ ಕೂಡ ಕ್ಷೇತ್ರದ ತುಂಬೆಲ್ಲ ಓಡಾಡುತ್ತಿದ್ದರು. ಈಗಲೂ ಓಡಾಡುತ್ತಿದ್ದಾರೆ. ಆದರೆ, ಈಗ ಕ್ಷೇತ್ರದಿಂದ ಕಾಲ್ಕಿತ್ತಿದ್ದಾರೆ..
ಮಾಜಿ ಸಿಎಂ ಕುಮಾರಸ್ವಾಮಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದರು. ಆದರೆ, ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧಿಸಿ ಗೆದ್ದು, ಕೇಂದ್ರ ಸಚಿವರಾಗಿದ್ದಾರೆ. ಹೀಗಾಗಿ ಅವರು ಚನ್ನಪಟ್ಟಣಕ್ಕೆ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಈ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಹಾಗೂ ಮೈತ್ರಿ ಮಧ್ಯೆ ಈಗಿನಿಂದಲೇ ತಂತ್ರ- ಪ್ರತಿತಂತ್ರ ಶುರುವಾಗಿದೆ.

ಕಾಂಗ್ರೆಸ್ ಪಾಳಯದಲ್ಲಿ ಡಿಕೆಶಿ ಅವರೇ ಅಖಾಡಕ್ಕೆ ಇಳಿಯುತ್ತಾರೆ ಎನ್ನಲಾಗುತ್ತಿತ್ತು. ಈಗಾಗಲೇ ಐದಾರು ಬಾರಿ ಚನ್ನಪಟ್ಟಣಕ್ಕೆ ಭೇಟಿ ನೀಡಿದ್ದು, ಕ್ಷೇತ್ರದಾದ್ಯಂತ ಸುತ್ತಾಡಿ ಮತದಾರರನ್ನು ಸೆಳೆದಿಟ್ಟುಕೊಳ್ಳುವ ಕಾರ್ಯ ಮಾಡುತ್ತಿದ್ದಾರೆ. ಹೀಗಾಗಿಯೇ ತಾವೇ ಸ್ಪರ್ಧೆ ಮಾಡುವುದಾಗಿ ಈ ಹಿಂದೆ ಸುಳಿವು ನೀಡಿದ್ದರು. ಆದ್ರೆ, ಇದೀಗ ಅವರು ವರಸೆ ಬದಲಿಸಿದ್ದು, ಬೇರೆಯವರು ಸ್ಪರ್ಧೆ ಮಾಡುವ ಬಗ್ಗೆ ಪರೋಕ್ಷವಾಗಿ ಹೇಳಿದ್ದಾರೆ.
ಚನ್ನಪಟ್ಟಣದಲ್ಲಿ ಮಾತನಾಡುತ್ತ ಡಿಕೆಶಿ, ಯಾರೇ ಅಭ್ಯರ್ಥಿ ಆದರೂ ನನ್ನ ಮುಖ ನೋಡಿ ವೋಟ್ ಹಾಕಿ ಎಂದು ಹೇಳಿದ್ದಾರೆ. ಈ ಮೂಲಕ ತಾವು ಸ್ಪರ್ಧೆ ಮಾಡುವುದಿಲ್ಲ ಬೇರೆಯವರು ಸ್ಪರ್ಧೆ ಮಾಡುತ್ತಾರೆ ಅವರಿಗೆ ನನ್ನ ಮುಖ ನೋಡಿ ಮತ ನೀಡಿ ಎಂಬರ್ಥದಲ್ಲಿ ಹೇಳಿದ್ದಾರೆ ಎಂದು ಹೇಳಿದಂತಿದೆ.
ಅಲ್ಲದೇ, ಪ್ರತಿ ಜಿಲ್ಲೆಯಲ್ಲೂ ಜನಸ್ಪಂದನ ಕಾರ್ಯಕ್ರಮ ನಡೆಸಲು ಸಿಎಂ ಸೂಚನೆ ನೀಡಿದ್ದಾರೆ. ಅದರಂತೆ ಚನ್ನಪಟ್ಟಣದಲ್ಲಿ ನಾನು ವಿಶೇಷ ಆದ್ಯತೆ ನೀಡಿ ಕಾರ್ಯಕ್ರಮ ಮಾಡ್ತಿದ್ದೇನೆ. ಜನರ ಸಮಸ್ಯೆಗಳನ್ನ ಬಗೆಹರಿಸಿ ತೊಂದರೆ ತಪ್ಪಿಸಬೇಕು. ಅರ್ಜಿ ವಿಲೇವಾರಿಗೆ ಅಧಿಕಾರಿಗಳಿಗೆ ಟೈಂ ಪಿಕ್ಸ್ ಮಾಡ್ತಿದ್ದೇವೆ. ಶೀಘ್ರದಲ್ಲೇ ಜನರ ಜನರ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಕಂಡಿರುವ ಡಿಕೆ ಶಿವಕುಮಾರ್ ಸಹೋದರ್ ಡಿಕೆ ಸುರೇಶ್, ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಾರೆ ಎನ್ನುವ ಚರ್ಚೆ ನಡೆದಿತ್ತು. ಆದ್ರೆ ಡಿಕೆ ಶಿವಕುಮಾರ್ ತಾವೇ ಸ್ಪರ್ಧೆ ಮಾಡುವುದಾಗಿ ಹೇಳಿ ಅದನ್ನು ಡೈವರ್ಟ್ ಮಾಡಿದ್ದರು. ಆನಂತರ ಡಿಕೆಶಿ ಪುತ್ರಿ ಐಶ್ವರ್ಯ ಸ್ಪರ್ಧಿಸುತ್ತಾರೆ ಎಂಬ ಮಾತು ಬಂದಿತ್ತು. ಅವರು ಕೂಡ ಸ್ಪರ್ಧಿಸುವುದಿಲ್ಲ ಎಂದು ಸ್ವತಃ ಡಿಕೆಶಿಯೇ ಹೇಳಿದ್ದರು. ಆದರೆ, ಈಗ ಅವರು ಕೂಡ ಹಿಂದೆ ಸರಿಯುವ ಮಾತುಗಳನ್ನು ಹೇಳುತ್ತಾರೆ. ಇದನ್ನು ಗಮನಿಸಿದರೆ, ಡಿಕೆಶಿ ಕೂಡ ಚನ್ನಪಟ್ಟಣದಲ್ಲಿ ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದಾರೆಯೇ? ಅವರಿಗೂ ಸೋಲಿನ ಭೀತಿ ಕಾಡುತ್ತಿದೆಯೇ ಎಂಬ ಪ್ರಶ್ನೆ ಮತದಾರರನ್ನು ಕಾಡುತ್ತಿದೆ.