ಬೆಂಗಳೂರು: ಈ ಸರ್ಕಾರ ಪಾಪರ್ ಆಗಿದೆ. ಸಾರಿಗೆ ನೌಕರರ ಹೊಟ್ಟೆ ಮೇಲೆ ಹೊಡೆಯದೇ ನೌಕರರ ಬೇಡಿಕೆ ಈಡೇರಿಸಬೇಕು ಎಂದು ಸರ್ಕಾರಕ್ಕೆ ವಿಪಕ್ಷ ನಾಯಕ ಆರ್. ಅಶೋಕ್ ಆಗ್ರಹಿಸಿದ್ದಾರೆ.
ಸಾರಿಗೆ ನೌಕರರ ಮುಷ್ಕರದ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಸಾರಿಗೆ ನೌಕರರ ಹೋರಾಟ ನಡೆಯುತ್ತಿದೆ. ಈ ಸರ್ಕಾರ ಮಹಿಳೆಯರಿಗೆ ಫ್ರೀ ಬಸ್ ಎಂದು ಹೇಳಿದ್ದರು. ಇವತ್ತು ಫ್ರೀ ಬಸ್ ಕಟ್ ಆಗಿದೆ. ಇವರು ಹೇಳುತ್ತಿದ್ದರು ಸರ್ಕಾರ ಪಾಪರ್ ಆಗಿಲ್ಲ. ಹಣ ನಮ್ಮ ಬಳಿ ಕೊಳೆಯುತ್ತಿದೆ. ಖಜಾನೆ ತುಂಬಿ ಆಚೆ ಹೋಗುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಮಿಸ್ಟರ್ ಸಿದ್ದರಾಮಯ್ಯ ಅವರೇ.. ಯಡಿಯೂರಪ್ಪ ಸಿಎಂ ಆಗಿದ್ದಾಗ, ನಾನು ಸಾರಿಗೆ ಮಂತ್ರಿ ಆಗಿದ್ದಾಗ ಶೇ. 15ರಷ್ಟು ಸಂಬಳ ಜಾಸ್ತಿ ಮಾಡಿದ್ದೇವು. ಅಂದು ಸುಮಾರು 480 ಕೋಟಿ ರೂ. ಹಣ ಕೊಟ್ಟಿದ್ದೇವು. ಸಾರಿಗೆ ನೌಕರರ ಅವರ ಎಲ್ಲಾ ಬೇಡಿಕೆ ನಾವು ತೀರಿಸಿದ್ದೇವೆ ಎಂದು ಸರ್ಕಾರಕ್ಕೆ ತಿರುಗೇಟು ಕೊಟ್ಟಿದ್ದಾರೆ.
ಕೋವಿಡ್ ವೇಳೆ ಬಿಜೆಪಿ ಹೈಕ್ ಮಾಡಿಲ್ಲ ಎಂದು ಹೇಳುತ್ತಾರೆ. ಸಿದ್ದರಾಮಯ್ಯಅವರೇ, ಬೇರೆ ರಾಜ್ಯಗಳಲ್ಲಿ ಸಂಬಳವೇ ಕೊಟ್ಟಿರಲಿಲ್ಲ. ನಾವು ಸಂಬಳ ಕೊಟ್ಟಿದ್ದೇವು. ಕೋವಿಡ್ ಕಾರಣ ಹೈಕ್ ಮಾತ್ರ ಕೊಟ್ಟಿರಲಿಲ್ಲ. ಇಡೀ ವಿಶ್ವದಲ್ಲಿ ಯಾರು ಹೈಕ್ ಕೊಟ್ಟಿರಲಿಲ್ಲ. ಅದನ್ನು ಇಟ್ಟುಕೊಂಡು ನಮ್ಮ ಮೇಲೆ ಆರೋಪ ಮಾಡೋದು ಸರಿಯಲ್ಲ ಎಂದು ಕುಟುಕಿದ್ದಾರೆ.
ನಾವು ಆಗ ಹೈಕ್ ಕೊಟ್ಟಿರಲಿಲ್ಲ. ಈಗ ನೀವು ಕೊಡಿ, ಸಾರಿಗೆ ನೌಕರರ ಹೊಟ್ಟೆ ಮೇಲೆ ಹೊಡೆಯಬೇಡಿ. ನೌಕರರ ನ್ಯಾಯಯುತ ಬೇಡಿಕೆಗಳಿಗೆ ನಮ್ಮ ಬೆಂಬಲ ಇದೆ. ಸಿಎಂ ಸಿದ್ದರಾಮಯ್ಯ ನಿದ್ರೆ ಮಾಡೋದು ಬಿಟ್ಟು ನೌಕರರ ಸಭೆ ಮಾಡಿ ಸಮಸ್ಯೆಗಳಿಗೆ ಪರಿಹಾರ ಕೊಡಿ. ನಿಮ್ಮಿಂದ ಸಮಸ್ಯೆ ಪರಿಹಾರ ಮಾಡಲು ಆಗದೇ ಹೋದರೆ ಅಧಿಕಾರ ಬಿಟ್ಟು ಹೋಗಿ ಎಂದು ಆಗ್ರಹ ಮಾಡಿದರು.
ಜನರಿಗೆ ಈ ಸರ್ಕಾರ ಸಮಸ್ಯೆ ಕೊಡುತ್ತಿದೆ.. ಈ ಶಾಪ ನಿಮಗೆ ತಟ್ಟುತ್ತದೆ. ಇದು ಪಾಪರ್ ಸರ್ಕಾರ. ನೌಕರರ ಬೇಡಿಕೆ ಸರ್ಕಾರ ಈಡೇರಿಸಬೇಕು ಎಂದು ಒತ್ತಾಯ ಮಾಡಿದರು.



















