ಬಳ್ಳಾರಿ : ಸಂಡೂರಿನಲ್ಲಿ ಅನ್ನಪೂರ್ಣ ಗೆದ್ದರೆ ನಾನು ಗೆದ್ದಂತೆ ಹಾಗೂ ಸಂತೋಷ್ ಲಾಡ್ ಗೆದ್ದಂತೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸಂಡೂರು ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಮ್ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಸಂಡೂರು ಕ್ಷೇತ್ರದಿಂದ ಅನ್ನಪೂರ್ಣ ಗೆದ್ದರೆ, ನಾನೇ ಇಲ್ಲಿಗೆ ಬಂದು ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
ಈ ಕ್ಷೇತ್ರ ಅಭಿವೃದ್ಧಿಯಾಗಲು ಕಾಂಗ್ರೆಸ್ ಗೆಲುವು ಸಾಧಿಸಬೇಕು. ಬಿಜೆಪಿಯವರು ಸುಳ್ಳು ಭರವಸೆ ನೀಡುತ್ತಾರೆ. ಸುಳ್ಳು ಆರೋಪ ಮಾಡುತ್ತಾರೆ. ಇದಕ್ಕೆಲ್ಲ ನೀವು ಸರಿಯಾಗಿ ಪಾಠ ಕಲಿಸಬೇಕು ಎಂದು ಸಲಹೆ ನೀಡಿದ್ದಾರೆ.
ನೀರು, ರಸ್ತೆ, ಶಾಲೆ, ಆಸ್ಪತ್ರೆ ಮುಂತಾದ ಸೌಲಭ್ಯ ನೀಡಿದವರು ಈ.ತುಕಾರಾಮ್. ಈ ಬಾರಿ ಅವರ ಪತ್ನಿ ಸ್ಪರ್ಧಿಸಿದ್ದು, ಅವರಿಗೆ ಮತ ನೀಡಿ ಗೆಲ್ಲಿಸಬೇಕು. ಕಾಂಗ್ರೆಸ್ ಎಂದೆಂದೂ ದಲಿತರು, ಬಡವರು, ಹಿಂದುಳಿದವರ ಪಕ್ಷ. ಇಂದಿರಾಗಾಂಧಿ, ಸೋನಿಯಾಗಾಂಧಿ, ರಾಜೀವ್ ಗಾಂಧಿ, ಮನಮೋಹನ್ ಸಿಂಗ್ ಅವರು ಬಡವರಿಗೆ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದು, ಮತದಾರರು ಮರೆಯಬಾರದು ಎಂದಿದ್ದಾರೆ.