ಬೆಂಗಳೂರು : ಹಾಸನಾಂಬ ದೇವಾಲಯಕ್ಕೆ ಅನಧಿಕೃತ ವ್ಯಕ್ತಿಗಳಿಗೆ ಪ್ರವೇಶ ಕೊಡಿಸಲು ತಮ್ಮ ಐಡಿ ಕಾರ್ಡ್ ದುರುಪಯೋಗ ಮಾಡಿದ ಆರೋಪದ ಅಡಿಯಲ್ಲಿ ಇಬ್ಬರು ಸರ್ಕಾರಿ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ. ಸಚಿವ ಕೃಷ್ಣ ಬೈರೇಗೌಡ ಅವರ ಸೂಚನೆಯ ಮೇರೆ ಈ ಶಿಸ್ತು ಕ್ರಮ ಕೈಗೊಳ್ಳಲಾಗಿದೆ.

ಹಾಸನಾಂಬ ದೇವಾಲಯದ ಆವರಣಕ್ಕೆ ಅನಧಿಕೃತ ಜನರಿಗೆ ಪ್ರವೇಶ ನೀಡಲು ತಮ್ಮ ಅಧಿಕೃತ ಗುರುತಿನ ಚೀಟಿಯನ್ನು ದುರುಪಯೋಗ ಮಾಡಿಕೊಂಡಿದ್ದಕ್ಕಾಗಿ ಮೊದಲ ದಿನವೇ ಇಬ್ಬರು ಸರ್ಕಾರಿ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಇದು ನಮ್ಮ ನಿರ್ದೇಶನಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಸರ್ಕಾರಿ ಗುರುತಿನ ಚೀಟಿಯನ್ನು ದುರುಪಯೋಗಪಡಿಸಿಕೊಳ್ಳುವುದು ಗಂಭೀರ ಅಪರಾಧ. ಈ ಇಬ್ಬರು ಅಧಿಕಾರಿಗಳು ತಮ್ಮ ಅಧಿಕೃತ ಗುರುತಿನ ಚೀಟಿಯನ್ನು ಅನಧಿಕೃತ ಜನರಿಗೆ ನೀಡಿ ದೇವಾಲಯ ಪ್ರವೇಶಕ್ಕೆ ಅವಕಾಶ ನೀಡಿದ್ದರು ಎಂದು ಸಚಿವರು ತಮ್ಮ ಹೇಳಿಕೆಯಲ್ಲಿ ವಿವರಣೆ ನೀಡಿದ್ದಾರೆ.
ಇನ್ನು ಹಾಸಬಾಂಬ ದೇವಿಯ ಉತ್ಸವವನ್ನು ಈ ಬಾರಿ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಲಾಗುತ್ತಿದೆ. ಖುದ್ದಾಗಿ ಸಚಿವ ಕೃಷ್ಣ ಬೈರೇಗೌಡ ಅವರು ಇದರ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಅಧಿಕಾರಿಗಳಿಗೆ ಸೂಕ್ತ ಸೂಚನೆಗಳನ್ನು ನೀಡುತ್ತಿದ್ದಾರೆ. ಅಲ್ಲದೆ, ಜನರ ಬಳಿಕ ತೆರಳಿ ಅಭಿಪ್ರಾಯ, ಸಲಹೆಗಳನ್ನು ಸಂಗ್ರಹ ಮಾಡಿಕೊಳ್ಳುತ್ತಿದ್ದಾರೆ. ಎರಡನೇ ದಿನವೂ ಹಾಸನಾಂಬ ದೇವಾಲಯಕ್ಕೆ ಆಗಮಿಸಿ ಜನರ ಬಳಿ ದೇವಿಯ ಸುಗಮ ದರ್ಶನದ ಬಗ್ಗೆ ಸಚಿವ ಕೃಷ್ಣ ಬೈರೇಗೌಡ ವಿಚಾರಿಸಿದ್ದಾರೆ.