ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಾಂಡಿಮೆಂಟ್ಸ್ ಸೇರಿ ವಿವಿಧ ವ್ಯಾಪಾರಿಗಳಿಗೆ ಜಿಎಸ್ ಟಿ ನೋಟಿಸ್ ನೀಡಿರುವುದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಈಗಲೂ ನೂರಾರು ಅಂಗಡಿಗಳು ಯುಪಿಐ ಪೇಮೆಂಟ್ ಸ್ವೀಕರಿಸುತ್ತಿಲ್ಲ. ಇದರ ಮಧ್ಯೆಯೇ, ಐಸಿಐಸಿಐ ಬ್ಯಾಂಕ್ ಹೊಸ ನಿಯಮ ಜಾರಿಗೆ ತಂದಿದೆ. ಯುಪಿಐ ವಹಿವಾಟಿನ ಮೇಲೆ ಐಸಿಐಸಿಐ ಬ್ಯಾಂಕ್ ಶುಲ್ಕ ವಿಧಿಸಲು ಆರಂಭಿಸಿದೆ.
ಹೌದು, ಯೆಸ್ ಬ್ಯಾಂಕ್ ಮತ್ತು ಎಕ್ಸಿಸ್ ಬ್ಯಾಂಕ್ ಬಳಿಕ ಐಸಿಐಸಿಐ ಬ್ಯಾಂಕ್ ಕೂಡ ಯುಪಿಐ ವಹಿವಾಟಿಗೆ ಶುಲ್ಕ ವಿಧಿಸುತ್ತಿದೆ. ಸದ್ಯ ಇದು ಪೇಟಿಎಂ, ಗೂಗಲ್ ಪೇ, ಫೋನ್ ಪೇನಂತಹ ಪೇಮೆಂಟ್ ಅಗ್ರಿಗೇಟರ್ ಗಳಿಗೆ ವಿಧಿಸುತ್ತಿರುವ ಶುಲ್ಕವಾಗಿದೆ. ಮುಂದಿನ ದಿನಗಳಲ್ಲಿ ಪೇಮೆಂಟ್ ಅಗ್ರಿಗೇಟರ್ ಗಳು ಈ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಿದರೂ ಅಚ್ಚರಿ ಇಲ್ಲ ಎಂದು ಹೇಳಲಾಗುತ್ತಿದೆ.
ವ್ಯಾಪಾರಿಗಳ ಯುಪಿಐ ವಹಿವಾಟುಗಳನ್ನು ನಿರ್ವಹಿಸುವ ಪೇಮೆಂಟ್ ಅಗ್ರಿಗೇಟರ್ ಗಳಿಗೆ ಐಸಿಐಸಿಐ ಬ್ಯಾಂಕ್ ಆಗಸ್ಟ್ 2 ರಿಂದ ಶುಲ್ಕ ವಿಧಿಸುತ್ತಿದೆ. ಒಂದು ವಹಿವಾಟಿಗೆ 2 ರಿಂದ 4 ಮೂಲಾಂಕಗಳಷ್ಟು ಶುಲ್ಕ ವಿಧಿಸುತ್ತದೆ. ಐಸಿಐಸಿಐ ಬ್ಯಾಂಕ್ ನಲ್ಲಿ ವಿಶೇಷ ಎಸ್ ಕ್ರೋ ಅಕೌಂಟ್ (Escrow account) ಹೊಂದಿರುವ ಅಗ್ರಿಗೇಟರ್ ಗಳಿಗೆ 2 ಮೂಲಾಂಕಗಳಷ್ಟು ಶುಲ್ಕ ಹಾಕಲಾಗುತ್ತಿದೆ. ಅಂದರೆ, ಪ್ರತಿ 100 ರೂ ಹಣ ಪಾವತಿಗೆ 2 ರೂ ಶುಲ್ಕ ಇರುತ್ತದೆ. ಶುಲ್ಕ ಮಿತಿ ಗರಿಷ್ಠ 6 ರೂ ಇದೆ. ಹಾಗಾಗಿ, ಮುಂದಿನ ದಿನಗಳಲ್ಲಿ ಅಗ್ರಿಗೇಟರ್ ಗಳು ಗ್ರಾಹಕರಿಗೆ ಈ ಶುಲ್ಕವನ್ನು ವರ್ಗಾಯಿಸುವ ಸಾಧ್ಯತೆ ಹೆಚ್ಚಿದೆ.
ಅಷ್ಟೇ ಅಲ್ಲ, ಎಸ್ ಕ್ರೋ ಅಕೌಂಟ್ ಹೊಂದಿರದ ಪೇಮೆಂಟ್ ಅಗ್ರಿಗೇಟರ್ ಗಳಿಗೆ ಐಸಿಐಸಿಐ ಬ್ಯಾಂಕ್ 4 ಮೂಲಾಂಕಗಳಷ್ಟು ಶುಲ್ಕ ಹಾಕುತ್ತಿದೆ. ಇಲ್ಲಿ ಶುಲ್ಕ ಮಿತಿ 10 ರೂ ಇದೆ. ಅಂದರೆ, ಎ ಸ್ಕ್ರೋ ಅಕೌಂಟ್ ಇಲ್ಲದ ಪೇಮೆಂಟ್ ಅಗ್ರಿಗೇಟರ್ ಗಳು ಪ್ರತೀ ವಹಿವಾಟಿಗೆ 10 ರೂವರೆಗೆ ಶುಲ್ಕ ಪಾವತಿಸಬೇಕಾಗುತ್ತದೆ. ಹಾಗೊಂದು ವೇಳೆ, ಯುಪಿಐ ಪೇಮೆಂಟ್ ಸ್ವೀಕರಿಸುವ ವರ್ತಕರು ಐಸಿಐಸಿಐ ಬ್ಯಾಂಕ್ ನಲ್ಲಿ ಅಕೌಂಟ್ ಹೊಂದಿದ್ದು, ಅ ಖಾತೆಗೆ ಸೆಟಲ್ ಮೆಂಟ್ ಸ್ವೀಕರಿಸುತ್ತಿದ್ದರೆ ಆಗ ಈ ಶುಲ್ಕದಿಂದ ವಿನಾಯಿತಿ ಸಿಗುತ್ತದೆ.