ಬೆಂಗಳೂರು: ಇತ್ತೀಚೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿ ಐ), ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಸೇರಿ ಹಲವು ಬ್ಯಾಂಕುಗಳು ಉಳಿತಾಯ ಖಾತೆಯ ಕನಿಷ್ಠ ಠೇವಣಿ ಮೊತ್ತದ ಮಿತಿಯನ್ನು ಸೊನ್ನೆಗೆ ಇಳಿಸುವ ಮೂಲಕ ಗ್ರಾಹಕ ಸ್ನೇಹಿ ನಿರ್ಧಾರ ತೆಗೆದುಕೊಂಡಿದ್ದವು. ಇದರ ಮಧ್ಯೆಯೇ, ಐಸಿಐಸಿಐ ಬ್ಯಾಂಕ್ ಈಗ ಮಿನಿಮಮ್ ಬ್ಯಾಲೆನ್ಸ್ ಮಿತಿಯನ್ನು 50 ಸಾವಿರ ರೂಪಾಯಿಗೆ ಏರಿಕೆ ಮಾಡಿದೆ. ಇದು ಈಗ ಗ್ರಾಹಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಹೌದು, ನೀವು ಮೆಟ್ರೋ ಹಾಗೂ ನಗರ ಪ್ರದೇಶಗಳಲ್ಲಿರುವ ಐಸಿಐಸಿಐ ಬ್ರ್ಯಾಂಚಿನಲ್ಲಿ ಬ್ಯಾಂಕ್ ಖಾತೆ ಹೊಂದಿದ್ದರೆ, ನೀವು ಕನಿಷ್ಠ 50 ಸಾವಿರ ರೂಪಾಯಿಯನ್ನ ಮಿನಿಮಮ್ ಬ್ಯಾಲೆನ್ಸ್ ಆಗಿ ಇರಿಸಬೇಕು. ಇಲ್ಲದಿದ್ದರೆ ನಿಮಗೆ ದಂಡ ಬೀಳುತ್ತದೆ. ನಗರ ಪ್ರದೇಶಗಳಲ್ಲಿ ಸಣ್ಣ ಉದ್ಯಮ ಹೊಂದಿದವರು, ಕಡಿಮೆ ಆದಾಯ ಹೊಂದಿದವರು ಇದರಿಂದಾಗಿ ಐಸಿಐಸಿಐ ಬ್ಯಾಂಕುಗಳಲ್ಲಿ ಖಾತೆ ಹೊಂದುವುದೇ ಕಷ್ಟವಾಗಲಿದೆ.
ಇನ್ನು, ಪಟ್ಟಣ ಪ್ರದೇಶಗಳಲ್ಲಿ ನೀವು ಐಸಿಐಸಿಐ ಬ್ಯಾಂಕ್ ಖಾತೆ ಹೊಂದಿದ್ದರೆ, ಕನಿಷ್ಠ 25 ಸಾವಿರ ರೂಪಾಯಿ ಠೇವಣಿ ಇರಿಸಬೇಕು. ಇನ್ನು ಗ್ರಾಮೀಣ ಪ್ರದೇಶಗಳಲ್ಲಿ ಖಾತೆ ಹೊಂದಿದವರು 10 ಸಾವಿರ ರೂಪಾಯಿ ಠೇವಣಿ ಇರಿಸಬೇಕು ಎಂದು ಐಸಿಐಸಿಐ ಬ್ಯಾಂಕ್ ಹೊಸ ಆದೇಶ ಹೊರಡಿಸಿದೆ. ಇದಕ್ಕೂ ಮೊದಲು, ಮೆಟ್ರೋ ಸಿಟಿಗಳಲ್ಲೇ 10 ಸಾವಿರ ರೂಪಾಯಿ ಮಿನಿಮಮ್ ಬ್ಯಾಲೆನ್ಸ್ ನಿಯಮವಿತ್ತು. ಈಗ ಇದನ್ನು 50 ಸಾವಿರ ರೂ.ಗೆ ಏರಿಸಿರುವುದು ಗ್ರಾಹಕರ ಕೆಂಗಣ್ಣಿಗೆ ಗುರಿಯಾಗಿದೆ.
ದಂಡ ಎಷ್ಟು ಬೀಳತ್ತೆ?
ಉಳಿತಾಯ ಖಾತೆಯಲ್ಲಿ ಕನಿಷ್ಠ ಠೇವಣಿ ಇರಿಸದಿದ್ದರೆ 500 ರೂಪಾಯಿವರೆಗೆ ದಂಡ ವಿಧಿಸಲಾಗುತ್ತದೆ. ಯಾವುದೇ ಉಳಿತಾಯ ಖಾತೆಯಲ್ಲಿ ಮಧ್ಯಮ ವರ್ಗದವರು 50 ಸಾವಿರ ರೂಪಾಯಿ ಬ್ಯಾಲೆನ್ಸ್ ಮೆಂಟೇನ್ ಮಾಡುವುದು ಕಷ್ಟಸಾಧ್ಯವಾಗಿದೆ. ಹೀಗಿದ್ದರೂ ಬ್ಯಾಂಕ್ ಹೊಸ ನಿಯಮ ಜಾರಿಗೆ ತಂದಿರುವ ಕುರಿತು ಗ್ರಾಹಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.