ದುಬೈ: ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಪ್ರಕಟಿಸಿರುವ 2024ರ ವರ್ಷದ ಮಹಿಳಾ ಟ್ವೆಂಟಿ-20 ಕ್ರಿಕೆಟ್ ತಂಡದಲ್ಲಿ (ICC Womens T20I Team of the Year) ಭಾರತದ ಮೂವರು ಆಟಗಾರ್ತಿಯರು ಸ್ಥಾನ ಪಡೆದಿದ್ದಾರೆ. ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ, ವಿಕೆಟ್ ಕೀಪರ್ ಬ್ಯಾಟರ್ ರಿಚಾ ಘೋಷ್ ಮತ್ತು ಆಲ್‌ರೌಂಡರ್ ದೀಪ್ತಿ ಶರ್ಮಾ ಐಸಿಸಿ ತಂಡದಲ್ಲಿ ಸ್ಥಾನ ಪಡೆದವರು.
ಅಂದ ಹಾಗೆ ಸ್ಮೃತಿ ಮಂದಾನ ಹಾಗೂ ದೀಪ್ತಿ ಶರ್ಮಾ ಐಸಿಸಿ ವರ್ಷದ ಮಹಿಳಾ ಏಕದಿನ ಕ್ರಿಕೆಟ್ ತಂಡದಲ್ಲೂ ಗುರುತಿಸಿಕೊಂಡಿದ್ದರು. ಹೀಗಾಗಿ ಅವರಿಬ್ಬರಿಗೆ ಎರಡೆರಡು ಖುಷಿ ಸಿಕ್ಕಿದೆ.
ಐಸಿಸಿ ವರ್ಷದ ಮಹಿಳಾ ಟ್ವೆಂಟಿ-20 ತಂಡದಲ್ಲಿ ಭಾರತೀಯರು ಆಟಗಾರ್ತಿಯರು ಅಧಿಪತ್ಯ ಸ್ಥಾಪಿಸಿದ್ದಾರೆ. ದಕ್ಷಿಣ ಆಫ್ರಿಕಾದ ಇಬ್ಬರು ಮತ್ತು ಶ್ರೀಲಂಕಾ, ಇಂಗ್ಲೆಂಡ್, ವೆಸ್ಟ್‌ಇಂಡೀಸ್, ಆಸ್ಟ್ರೇಲಿಯಾ, ಐರ್ಲೆಂಡ್ ಮತ್ತು ಪಾಕಿಸ್ತಾನದ ಒಬ್ಬರು ಸ್ಥಾನ ಪಡೆದುಕೊಂಡಿದ್ದಾರೆ.
ಕಳೆದ ವರ್ಷ ಎಂಟು ಟಿ20 ಅಂತಾರಾಷ್ಟ್ರೀಯ ಅರ್ಧಶತಕಗಳನ್ನು ಗಳಿಸಿರುವ ಮಂದಾನ, 42.38ರ ಸರಾಸರಿಯಲ್ಲಿ (126.53 ಸ್ಟ್ರೈಕ್‌ರೇಟ್) 763 ರನ್ ಗಳಿಸಿದ್ದಾರೆ. ಗರಿಷ್ಠ ಸ್ಕೋರ್ 77 ರನ್.
ಮತ್ತೊಂದೆಡೆ ರಿಚಾ ಘೋಷ್ 21 ಪಂದ್ಯಗಳಲ್ಲಿ 33.18ರ ಸರಾಸರಿಯಲ್ಲಿ (156.65) 365 ರನ್ ಗಳಿಸಿದ್ದಾರೆ. ಆಲ್‌ರೌಂಡ್ ಆಟಗಾರ್ತಿ ದೀಪ್ತಿ ಶರ್ಮಾ, ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. 23 ಪಂದ್ಯಗಳಲ್ಲಿ 30 ವಿಕೆಟ್ ಹಾಗೂ 115 ರನ್ ಗಳಿಸಿದ್ದಾರೆ.
ಐಸಿಸಿ ವರ್ಷದ ಮಹಿಳಾ ಟಿ20 ತಂಡಕ್ಕೆ ದಕ್ಷಿಣ ಆಫ್ರಿಕಾದ ಲಾರಾ ವೊಲ್ವಾರ್ಡ್ಟ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.