ವಿಶ್ವದ ನಂಬರ್ 1 ಟೆಸ್ಟ್ ಬೌಲರ್ ಜಸ್ಪ್ರೀತ್ ಬುಮ್ರಾ ಆಸ್ಟ್ರೇಲೀಯಾ ವಿರುದ್ಧ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಸಾಧನೆ ಮಾಡಿದ್ದಾರೆ.
ಈ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ನಾಲ್ಕು ವಿಕೆಟ್ ಪಡೆದಿರುವ ಬುಮ್ರಾ ಎರಡನೇ ಇನ್ನಿಂಗ್ಸ್ ನಲ್ಲಿ 5 ವಿಕೆಟ್ ಪಡೆದಿದ್ದಾರೆ. ಈ ವೇಳೆ ಐಸಿಸಿಯಿಂದ ಜಸ್ಪ್ರೀತ್ ಬುಮ್ರಾಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ. ಐಸಿಸಿಯು ಜಸ್ಪ್ರೀತ್ ಬುಮ್ರಾ ಅವರನ್ನು ಐಸಿಸಿ ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದೆ.
ಈ ವರ್ಷ ಬುಮ್ರಾ ಟೆಸ್ಟ್ ಕ್ರಿಕೆಟ್ ನಲ್ಲಿ ಹಲವು ದಾಖಲೆಗಳನ್ನು ಬರೆದಿದ್ದಾರೆ. ಈ ಕಾರಣದಿಂದಾಗಿ ಐಸಿಸಿ ವರ್ಷದ ಟೆಸ್ಟ್ ಕ್ರಿಕೆಟಿಗನಿಗೆ ನಾಮನಿರ್ದೇಶನಗೊಂಡಿದ್ದಾರೆ. ಇವರಲ್ಲದೆ ಇಂಗ್ಲೆಂಡ್‌ನ ಜೋ ರೂಟ್, ಹ್ಯಾರಿ ಬ್ರೂಕ್ ಮತ್ತು ಶ್ರೀಲಂಕಾದ ಕಮಿಂದು ಮೆಂಡಿಸ್ ಕೂಡ ಈ ಪಟ್ಟಿಯಲ್ಲಿದ್ದಾರೆ. ಈ ಪೈಪೋಟಿಯ ಮಧ್ಯೆ ಬುಮ್ರಾ ಅತ್ಯುತ್ತಮ ದಾಖಲೆ ಮತ್ತು ಪ್ರದರ್ಶನವನ್ನು ಪರಿಗಣಿಸಿ, ಅವರು 2024 ರ ಐಸಿಸಿಯ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಯನ್ನು ಬಾಚಿಕೊಳ್ಳುವ ಸಾಧ್ಯತೆಗಳಿವೆ.
ಬುಮ್ರಾ ಈ ವರ್ಷ 13 ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 71 ವಿಕೆಟ್ ಗಳನ್ನು ಪಡೆದಿದ್ದಾರೆ. ಈ ವರ್ಷ ಭಾರತ ಮಾತ್ರವಲ್ಲದೆ ಇಡೀ ವಿಶ್ವದಲ್ಲೇ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಇದಲ್ಲದೆ ಅವರ ಸರಾಸರಿ ಕೂಡ 15 (14.92) ಕ್ಕಿಂತ ಕಡಿಮೆ ಇದೆ.
ನಾಲ್ಕನೇ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ಐದು ವಿಕೆಟ್ ಪಡೆಯುವ ಮೂಲಕ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ದಾಖಲೆ ಮುರಿದಿದ್ದಾರೆ. ಶೋಯೆಬ್ ಅಖ್ತರ್ ಟೆಸ್ಟ್‌ನಲ್ಲಿ 12 ಬಾರಿ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್ ಪಡೆದಿದ್ದರು. ಈಗ ಬುಮ್ರಾ 13ನೇ ಬಾರಿಗೆ ಐದು ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.