ಐಸಿಸಿಯು 2024ರ ಅತ್ಯುತ್ತಮ ಟೆಸ್ಟ್ ತಂಡ ಪ್ರಕಟಿಸಿದೆ. ಈ ತಂಡದಲ್ಲಿ ಭಾರತದ ಮೂವರು ಸ್ಥಾನ ಪಡೆದಿದ್ದಾರೆ.
ಆಸ್ಟ್ರೇಲಿಯಾ ತಂಡದಿಂದ ಏಕೈಕ ಆಟಗಾರನಾಗಿ ಆಯ್ಕೆಯಾಗಿರುವ ವೇಗಿ ಪ್ಯಾಟ್ ಕಮ್ಮಿನ್ಸ್ಗೆ ತಂಡದ ನಾಯಕತ್ವದ ಜವಬ್ದಾರಿ ನೀಡಲಾಗಿದೆ. ಭಾರತದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಸ್ಥಾನ ಪಡೆದಿದ್ದಾರೆ., ಇಂಗ್ಲೆಂಡ್‌ನ ಬೆನ್ ಡಕೆಟ್ ಅವರೊಂದಿಗೆ ಎರಡನೇ ಆರಂಭಿಕ ಆಟಗಾರರಾಗಿದ್ದಾರೆ. ಕಳೆದ ವರ್ಷ ಜೈಸ್ವಾಲ್ ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ 2 ದ್ವಿಶತಕಗಳನ್ನು ಸಿಡಿಸಿದ್ದರೆ, ಪರ್ತ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧವೂ ಶತಕ ಸಿಡಿಸಿದ್ದರು.
ಜೈಸ್ವಾಲ್, ಜಡೇಜಾ, ಬುಮ್ರಾಗೆ ಸ್ಥಾನ
ಜೈಸ್ವಾಲ್ 2024 ರಲ್ಲಿ 29 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 54.74 ಸರಾಸರಿಯಲ್ಲಿ 1478 ರನ್ ಗಳಿಸಿದ್ದರು. 2 ಶತಕ ಮತ್ತು 9 ಅರ್ಧ ಶತಕಗಳನ್ನು ಗಳಿಸಿದ್ದರು. ಜೈಸ್ವಾಲ್ ಅಲ್ಲದೆ, ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಕೂಡ ಈ ತಂಡದ ಭಾಗವಾಗಿದ್ದಾರೆ. ಜಡೇಜಾ ಹಿಂದಿನ ವರ್ಷ 18 ಇನ್ನಿಂಗ್ಸ್ ಗಳಲ್ಲಿ 1 ಶತಕ ಮತ್ತು 3 ಅರ್ಧ ಶತಕ ಸೇರಿದಂತೆ 527 ರನ್ ಗಳಿಸಿದ್ದು, ಇತ್ತ ಬೌಲಿಂಗ್‌ನಲ್ಲಿ ಆಡಿರುವ 21 ಇನ್ನಿಂಗ್ಸ್ ಗಳಲ್ಲಿ 48 ವಿಕೆಟ್ ಪಡೆದಿದ್ದರು. ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಕೂಡ ಈ ತಂಡದ ಭಾಗವಾಗಿದ್ದಾರೆ. ಬುಮ್ರಾ 2024 ರಲ್ಲಿ 26 ಇನ್ನಿಂಗ್ಸ್ ಗಳಲ್ಲಿ ಗರಿಷ್ಠ 71 ವಿಕೆಟ್ ಪಡೆದಿದ್ದಾರೆ. ಇನ್ನಿಂಗ್ಸ್‌ನಲ್ಲಿ 5 ಬಾರಿ 5 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.
WTC ಫೈನಲಿಸ್ಟ್‌ನಿಂದ ಕೇವಲ ಒಬ್ಬ ಆಟಗಾರ
ಐಸಿಸಿ ಬಿಡುಗಡೆ ಮಾಡಿರುವ ಈ ಟೆಸ್ಟ್ ತಂಡದಲ್ಲಿ ಅತ್ಯಂತ ಅಚ್ಚರಿಯ ಸಂಗತಿಯೆಂದರೆ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ತಲುಪಿದ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳಲ್ಲಿ ಪ್ಯಾಟ್ ಕಮಿನ್ಸ್ ಒಬ್ಬರೇ ಒಬ್ಬರು ಸ್ಥಾನ ಪಡೆದಿದ್ದಾರೆ. ಗರಿಷ್ಠ 4 ಆಟಗಾರರು ಇಂಗ್ಲೆಂಡ್‌ನವರಾಗಿದ್ದರೆ, 3 ಆಟಗಾರರು ಭಾರತದಿಂದ, 2 ಆಟಗಾರರು ನ್ಯೂಜಿಲೆಂಡ್‌ನಿಂದ, ಆಸ್ಟ್ರೇಲಿಯಾ ಮತ್ತು ಶ್ರೀಲಂಕಾದಿಂದ ತಲಾ 1 ಆಟಗಾರರು ಇದ್ದಾರೆ.
ಐಸಿಸಿ ವರ್ಷದ ಟೆಸ್ಟ್ ಟೀಮ್: ಪ್ಯಾಟ್ ಕಮ್ಮಿನ್ಸ್ (ನಾಯಕ), ಯಶಸ್ವಿ ಜೈಸ್ವಾಲ್, ಬೆನ್ ಡಕೆಟ್, ಕೇನ್ ವಿಲಿಯಮ್ಸನ್, ಜೋ ರೂಟ್, ಹ್ಯಾರಿ ಬ್ರೂಕ್, ಕಮಿಂದು ಮೆಂಡಿಸ್, ಜೇಮಿ ಸ್ಮಿತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಮ್ಯಾಟ್ ಹೆನ್ರಿ ಮತ್ತು ಜಸ್ಪ್ರೀತ್ ಬುಮ್ರಾ ಸ್ಥಾನ ಪಡೆದಿದ್ದಾರೆ.