ಮುಂದಿನ ವರ್ಷ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಲು ಐಸಿಸಿ ಒಪ್ಪಿಕೊಂಡಿದೆ ಎಂದು ತಿಳಿದು ಬಂದಿದೆ.
ಮುಂಬರುವ ವರ್ಷ ಫೆಬ್ರುವರಿ-ಮಾರ್ಚ್ ನಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ಪಾಕಿಸ್ತಾನದ ಬದಲಿಗೆ ತಟಸ್ಥ ಸ್ಥಳದಲ್ಲಿ ಆಡುವ ನಿರ್ಧಾರಕ್ಕೆ ಐಸಿಸಿ ಗ್ರೀನ್ ಸಿಗ್ನಲ್ ನೀಡಿದೆ ಎನ್ನಲಾಗಿದೆ.
ಐಸಿಸಿ ಪಾಕಿಸ್ತಾನಕ್ಕೆ ಹೊಸ ಪಂದ್ಯಾವಳಿಯ ಆತಿಥ್ಯವನ್ನು ಸಹ ಬಹುಮಾನವಾಗಿ ನೀಡಿದ್ದು, ಈ ಪಂದ್ಯಾವಳಿಯೂ 2028 ರಲ್ಲಿ ನಡೆಯಲಿದೆ. ಚಾಂಪಿಯನ್ಸ್ ಟ್ರೋಫಿ ಆಯೋಜನೆಗೆ ಎದುರಾಗಿದ್ದ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದ್ದು ಕೆಲವೇ ದಿನಗಳಲ್ಲಿ ಚಾಂಪಿಯನ್ಸ್ ಟ್ರೋಫಿಯ ವೇಳಾಪಟ್ಟಿ ಕೂಡ ಬಿಡುಗಡೆಯಾಗಲಿದೆ.
ಎಲ್ಲಾ ಕ್ರಿಕೆಟ್ ಮಂಡಳಿಗಳ ಜೊತೆಗಿನ ಸಭೆಯ ನಂತರ ಚಾಂಪಿಯನ್ಸ್ ಟ್ರೋಫಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸುವ ತೀರ್ಮನ ಕೈಗೊಳ್ಳಲಾಗಿದೆ. ಪಂದ್ಯಾವಳಿಯ ಹೋಸ್ಟಿಂಗ್ ಅಧಿಕಾರವನ್ನು ಸಂಪೂರ್ಣವಾಗಿ ಪಾಕಿಸ್ತಾನಕ್ಕೆ ನೀಡಲಾಗಿದೆ. ಪಂದ್ಯಾವಳಿಯ ಪಂದ್ಯಗಳನ್ನು ಪಾಕಿಸ್ತಾನದಲ್ಲಿ ಮತ್ತು ತಟಸ್ಥ ಸ್ಥಳಗಳಲ್ಲಿ ಆಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿರುವ ಐಸಿಸಿ, ಸ್ಥಳಗಳ ಬಗ್ಗೆ ಮಾತ್ರ ಇದುವರೆಗೆ ಸ್ಪಷ್ಟನೆ ನೀಡಿಲ್ಲ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಮಾತ್ರವಲ್ಲದೆ 2027 ರವರೆಗೆ ನಡೆಯಲಿರುವ ಪ್ರತಿಯೊಂದು ಪಂದ್ಯಾವಳಿಯಲ್ಲೂ ಇದೇ ವ್ಯವಸ್ಥೆ ಅನ್ವಯವಾಗಲಿದೆ ಎಂದು ಐಸಿಸಿ ಹೇಳಿದೆ.
ಭಾರತವು 2025 ರಲ್ಲಿ ನಡೆಯಲಿರುವ ಮಹಿಳೆಯರ ಏಕದಿನ ವಿಶ್ವಕಪ್ಗೆ ಏಕಾಂಗಿಯಾಗಿ ಆತಿಥ್ಯ ವಹಿಸುತ್ತದೆ. ಉಳಿದಂತೆ 2026 ರಲ್ಲಿ ನಡೆಯಲ್ಲಿರುವ ಪುರುಷರ ಟಿ20 ವಿಶ್ವಕಪ್ ಗೆ ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆತಿಥ್ಯ ವಹಿಸಲಿವೆ. ಇಂತಹ ಪರಿಸ್ಥಿತಿಯಲ್ಲಿ ಪಾಕಿಸ್ತಾನ ತಂಡ ಈ ಎರಡೂ ಟೂರ್ನಿಗಳಲ್ಲಿ ಭಾರತದ ಹೊರಗೆ ತನ್ನ ಪಂದ್ಯಗಳನ್ನು ಆಡಲಿದೆ ಎನ್ನಲಾಗಿದೆ. ಹೀಗಾಗಿ ಅಲ್ಲಿಯವರೆಗೆ ಹೈಬ್ರಿಡ್ ಮಾದರಿಯಲ್ಲಿ ಪಂದ್ಯ ಆಯೋಜಿಸಲು ತೀರ್ಮಾನ ಕೈಗೊಳ್ಳಳಾಗಿದೆ.