ಪ್ರಾಣಕ್ಕಿಂತ ಭಾರತ ಮಾತೆಯ ಜೀವವೇ ದೊಡ್ಡದು. ಅವಳಿಗಾಗಿಯೇ ಈ ಪ್ರಾಣ ಮುಡಿಪು ಎಂದು ಹೇಳಿ, ಅದರಂತೆಯೇ ತಾಯಿಗಾಗಿ ಪ್ರಾಣ ಬಿಟ್ಟ ಭಾರತಾಂಬೆಯ ಹೆಮ್ಮೆಯ ಪುತ್ರನ ಮನ ಕಲಕುವ ಕಥೆಯಿದು. ಆ ಯೋಧ ಮಾತು ಕೊಟ್ಟಿದ್ದನಂತೆ, ನಾನು ಸಾಧಾರಣ ಸಾವು ಪಡೆಯುವುದಿಲ್ಲ. ಅದು ವೀರ ಮರಣವಾಗಿರುತ್ತದೆ…ಅಂತ. ಅದು ಹಾಗೆಯೇ ಆದ ಘಳಿಗೆ. ಕೇವಲ 2 ತಿಂಗಳು ಮಾತ್ರ ಪತಿಯೊಂದಿಗೆ ಸಂಸಾರ ನಡೆಸಿದ್ದ ಪತ್ನಿ, ಪತಿ ತನ್ನ ಮಾತುಗಳಂತೆ ನಡೆದುಕೊಂಡ ಪ್ರಸಂಗವನ್ನು ಹೇಳುತ್ತಿದ್ದಾಗ ಇಡೀ ದೇಶವೇ ಗದ್ಗಿತವಾದ ಘಟನೆಯಿದು.
ಕಳೆದ ವರ್ಷ ಉಗ್ರರೊಂದಿಗಿನ ಕಾದಾಟದಲ್ಲಿ ಹುತಾತ್ಮರಾಗಿದ್ದ ಭಾರತೀಯ ಸೇನೆಯ ಯೋಧ ಕ್ಯಾಪ್ಟನ್ ಅಂಶುಮನ್ ಸಿಂಗ್ ಅವರ ಪತ್ನಿ, ತಮ್ಮ ಪತಿ ಹೇಳಿದ್ದ ಈ ಮಾತುಗಳನ್ನು ಹೇಳುತ್ತ ನೋವಿನಲ್ಲಿ ನೆನಪಿಸಿಕೊಂಡಾಗ ರಾಷ್ಟ್ರಪತಿಗಳ ಕಣ್ಣು ಕೂಡ ತೇವವಾದವು. ಆಗ ದೇಶಕ್ಕಾಗಿ ಪ್ರಾಣ ತೆತ್ತ ಸೈನಿಕನ ಪತ್ನಿಯ ನೋವು, ಪತಿಯ ಸಾಹಸದ ಹೆಮ್ಮೆಯ ಮಾತು ಎರಡೂ ಅವರ ಮುಖದಲ್ಲಿ ಕಂಡು ಬಂದ ಕ್ಷಣವೂ ಹೌದು. ಬಿಳಿ ಸೀರೆಯಲ್ಲಿ, ದುಃಖ ಹಾಗೂ ಕಂಬನಿ ತುಂಬಿದ ಕಣ್ಣು ಹೊತ್ತು ಭಾರವಾದ ಹೆಜ್ಜೆಯೊಂದಿಗೆ ಅತ್ತೆ ಮಂಜು ಸಿಂಗ್ ಅವರ ಜತೆ ಸ್ಮೃತಿ ಸಿಂಗ್ ನಡೆದು ಬಂದ ದೃಶ್ಯ ಎಂತಹವರ ಕಣ್ಣಾಲಿಗಳಲ್ಲೂ ನೀರು ಜಿನುಗಿಸುವಂತೆ ಮಾಡಿತ್ತು.
ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಮುಂದೆ ಕೈ ಮುಗಿದು ನಿಂತಿದ್ದ ಸ್ಮೃತಿ ಅವರನ್ನು ಕಂಡು ಇಡೀ ಸಭಾಂಗಣ ಗದ್ಗದಿತವಾಯಿತು. ಸಿಯಾಚಿನ್ ನಲ್ಲಿ ನಡೆದ ಅವಘಡದಲ್ಲಿ ವೀರ ಮರಣ ಅಪ್ಪಿದ ಕ್ಯಾಪ್ಟನ್ ಅಂಶುಮನ್ ಸಿಂಗ್ ಗೆ ಮರಣೋತ್ತರವಾಗಿ ದೊರಕಿದ ದೇಶದ ಎರಡನೇ ಅತಿ ದೊಡ್ಡ ಗ್ಯಾಲಂಟ್ರಿ ಪ್ರಶಸ್ತಿಯಾದ ಕೀರ್ತಿ ಚಕ್ರ ಸ್ವೀಕರಿಸುವಾಗ ಕಂಡು ಬಂದ ಮನಕಲಕುವ ದೃಶ್ಯವಿದು.
ಆಗಲೇ ನೋಡಿ ಪತ್ನಿಯು ಪತಿಯ ಭಾವುಕ ಮಾತು ಹೇಳಿದ್ದು, ನಾನು ಸಾಧಾರಣ ಸಾವು ಪಡೆಯುವುದಿಲ್ಲ. ನನ್ನ ಎದೆಯ ಮೇಲೆ ಉನ್ನತ ಪದವಿಯ ಗುರುತಿನೊಂದಿಗೆ ಸಾಯುತ್ತೇನ ಎಂದು ಪತಿ ಹೇಳಿದ್ದರು ಎಂದು ಸ್ಮೃತಿ ಸಿಂಗ್ ಹೇಳುತ್ತಿದ್ದಾಗ ಇಡೀ ದೇಶಕ್ಕೆ ಹೆಮ್ಮೆ. ಆದರೆ ಸ್ಮೃತಿ ಅವರ ಎದೆಯಲ್ಲಿ ನೋವಿನ ಜ್ವಾಲೆ. ನಾವು ಕಾಲೇಜಿನ ಮೊದಲ ದಿನ ಭೇಟಿಯಾಗಿದ್ದೆವು. ನಾನು ನಾಟಕೀಯವಾಗಿ ಹೇಳಲ್ಲ. ಅದು ಮೊದಲ ನೋಟದಲ್ಲೇ ಚಿಗುರಿದ ಪ್ರೀತಿ. ಒಂದು ತಿಂಗಳ ನಂತರ ಅವರು ಸಶಸ್ತ್ರ ಪಡೆಗಳ ವೈದ್ಯಕೀಯ ಕಾಲೇಜಿಗೆ (ಎಎಫ್‌ಎಂಸಿ) ಆಯ್ಕೆಯಾದರು. ನಾವು ಭೇಟಿಯಾಗಿದ್ದು ಎಂಜಿನಿಯರಿಂಗ್ ಕಾಲೇಜಿನಲ್ಲಿ. ಆದರೆ ಅವರು ಆಯ್ಕೆಯಾಗಿದ್ದು ವೈದ್ಯಕೀಯ ಕಾಲೇಜಿಗೆ. ಅಪಾರ ಬುದ್ಧಿವಂತ ನನ್ನ ಹುಡುಗ. ಅಲ್ಲಿಂದ, ಭೇಟಿಯಾದ ಒಂದು ತಿಂಗಳ ನಂತರ ಸುದೀರ್ಘ ಅಂತರದ ಎಂಟು ವರ್ಷಗಳಷ್ಟು ಕಾಲ ಹಾಗೆಯೇ ಉಳಿದಿತ್ತು. ಕೊನೆಗೆ ನಾವು ಮದುವೆಯಾಗಲು ನಿರ್ಧರಿಸಿದೆವು. ದುರದೃಷ್ಟವಶಾತ್, ನಮ್ಮ ಮದುವೆಯಾಗಿ ಎರಡು ತಿಂಗಳಿಗೂ ಮುನ್ನ ಅವರಿಗೆ ಸಿಯಾಚಿನ್‌ನಲ್ಲಿ ಕರ್ತವ್ಯ ನಿಯೋಜನೆಯಾಯಿತು ಎಂದು ಸ್ಮೃತಿ ಭಾವುಕರಾಗಿ ಹೇಳಿದ್ದಾರೆ.
ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರನ್ನು ಸಿಯಾಚಿನ್ ಗ್ಲೇಸಿಯರ್ ಪ್ರದೇಶದ ವೈದ್ಯಕೀಯ ಅಧಿಕಾರಿಯಾಗಿ 26 ಪಂಜಾಬ್ ಪಡೆಗಳೊಂದಿಗೆ ನಿಯೋಜಿಸಲಾಗಿತ್ತು. 2023ರ ಜುಲೈ 19ರಂದು ಬೆಳಿಗ್ಗೆ 3 ಗಂಟೆಗೆ ಶಾರ್ಟ್ ಸರ್ಕೀಟ್‌ನಿಂದಾಗಿ ಭಾರತೀಯ ಸೇನೆಯ ಮದ್ದುಗುಂಡು ಸಂಗ್ರಹಾಗಾರದಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಆಗ ಫೈಬರ್‌ಗ್ಲಾಸ್‌ನಿಂದ ಮಾಡಿದ ಗುಡಿಸಲು ಹೊತ್ತಿ ಉರಿಯುತ್ತಿರುವುದನ್ನು ಕಂಡ ಸಿಂಗ್, ಒಳಗೆ ಸಿಲುಕಿರುವವರ ರಕ್ಷಣೆಗೆ ಕೂಡಲೇ ಧಾವಿಸಿದ್ದರು. ನಾಲ್ಕರಿಂದ ಐವರನ್ನು ಹೊರಗೆ ಕರೆತಂದು ರಕ್ಷಿಸುವಲ್ಲಿ ಸಫಲರಾಗಿದ್ದರು. ಆದರೆ ಬೆಂಕಿ ಸಮೀಪದ ವೈದ್ಯಕೀಯ ತನಿಖಾ ಕೊಠಡಿಗೂ ಬೆಂಕಿ ಆವರಿಸಿತ್ತು. ಬೆಂಕಿ ಜ್ವಾಲೆ ಆವರಿಸಿದ್ದ ಆ ಕೊಠಡಿಗೂ ಅಂಶುಮನ್ ನುಗ್ಗಿದ್ದರು. ಅವರ ಪ್ರಯತ್ನದ ಹೊರತಾಗಿಯೂ ಅವರಿಗೆ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಸಾಂಸಾರಿಕ ಬದುಕು ಆರಂಭಿಸುವ ಮುನ್ನವೇ ಈ ಮಹಾನ್ ಸೇವಕನ ಜೀವನ ಅಂತ್ಯಗೊಂಡಿತ್ತು. ಈ ಘಟನೆ ನೆನಸಿಕೊಂಡು ಸ್ಮೃತಿ ಗದ್ಗದಿತರಾಗಿದ್ದಾರೆ.
ಜುಲೈ 18ರಂದು ನಾವಿಬ್ಬರೂ ಸುದೀರ್ಘ ಸಂಭಾಷಣೆ ನಡೆಸಿದ್ದೆವು. ಮುಂದಿನ 50 ವರ್ಷಗಳಲ್ಲಿ ನಮ್ಮ ಜೀವನ ಹೇಗೆ ಇರಬಹುದು ಎಂದೆಲ್ಲ ನಾವು ಮಾತನಾಡಿ, ಹರಟೆ ಹೊಡೆದಿದ್ದೇವು. ಅಲ್ಲಿ ಯೋಜನೆ, ಯೋಚನೆ ಕೂಡ ರೂಪಗೊಂಡಿದ್ದವು. ಆದರೆ, ಜುಲೈ 19ರ ಬೆಳಿಗ್ಗೆ ಅವರು ಇನ್ನಿಲ್ಲ ಎಂದು ನನಗೆ ಕರೆ ಬಂದಿತು. ಮುಂದಿನ 7- 8 ಗಂಟೆ ನಾವು ಅಂತಹದ್ದೊಂದು ಘಟನೆ ನಡೆದಿದೆ ಎಂಬುದನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲಿಯೇ ನಾವು ಇರಲಿಲ್ಲ. ಚಿಗುರುವ ಮೊದಲೇ ತಮ್ಮ ವೈವಾಹಿಕ ಬದುಕು ಕಮರಿದ ಘೋರ ಸ್ಥಿತಿ ನಮ್ಮದು ಎಂದು ಹೇಳುತ್ತ ಸ್ಮೃತಿ ಕಣ್ಣೀರಾಗಿ ಹೋಗಿದ್ದಾರೆ. ನನ್ನ ಕೈಯಲ್ಲಿ ಪತಿ ಇಲ್ಲ. ಕೀರ್ತಿ ಚಕ್ರವಿದೆ. ಬಹುಶಃ ಇದು ಸತ್ಯ ಇರಬಹುದು. ಆದರೆ ತೊಂದರೆ ಇಲ್ಲ, ಅವರೊಬ್ಬರ ಹೀರೋ. ನಮ್ಮ ಪುಟ್ಟ ಜೀವನವನ್ನು ನಾವು ಹೇಗೋ ನಡೆಸಬಹುದು. ಅವರು ಇತರೆ ಕುಟುಂಬಗಳನ್ನು, ತಮ್ಮ ಸೇನಾ ಕುಟುಂಬವನ್ನು ಕಾಪಾಡುವಾಗ ತಮ್ಮ ಜೀವ ಅರ್ಪಿಸಿದ್ದಾರೆ ಎಂದು ಹೆಮ್ಮೆಯೊಂದಿಗೆ ಸ್ಮೃತಿ ಭಾರದ ನೋವು ಹೊರ ಹಾಕಿ ನೋವನ್ನು ನುಂಗಿದ್ದಾರೆ. ಇಡೀ ದೇಶವೇ ಈ ಮಹಾನ್ ಚೇತನದ ಕುಟುಂಬಕ್ಕೆ ಹಾರೈಸುತ್ತಿದೆ. ಹೆಮ್ಮೆ ಪಡುತ್ತಿದೆ. ಭಾರತದ ಮಣ್ಣೇ ಹಾಗೆ. ತಾಯಿಗಿಂತ ಭೂತಾಯಿ ದೊಡ್ಡವಳು.