ಗದಗ : ಮಹದಾಯಿ ಕಳಸಾ ಬಂಡೂರಿ ಯೋಜನೆ ಜಾರಿಗೆ ನಾಲ್ಕು ಹೆಜ್ಜೆ ಮುಂದಿಟ್ಟಿರುವದು ಬಿಜೆಪಿ. ಬಿ ಎಸ್ ಯಡಿಯೂರಪ್ಪನವರು 100 ಅನುದಾನ ಬಿಡುಗಡೆ ಮಾಡಿದ್ದರು. ಕೆ ಎಸ್ ಈಶ್ವರಪ್ಪನವರು ಕನಕುಂಬಿಯಲ್ಲಿ ಭೂಮಿ ಪೂಜೆಯನ್ನೂ ಮಾಡಿದ್ದರು. ಗೋವಾದ ಅಡೆತಡೆಯಿಂದ ಯೋಜನೆಗೆ ಹಿನ್ನಡೆಯಾಗಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ಸಿ ಸಿ ಪಾಟೀಲ್ ಹೇಳಿದ್ದಾರೆ.
ನರಗುಂದ ಪಟ್ಟಣದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮಹದಾಯಿ ಯೋಜನೆಯಲ್ಲಿ ನಾನು ರಾಜಕೀಯ ಮಾಡಲ್ಲ. ಮಹದಾಯಿ ಯೋಜನೆಯನ್ನು ಬಿಜೆಪಿ ಪ್ರಾರಂಭ ಮಾಡಿದೆ. ಅದಕ್ಕೆ ಅನುದಾನ ಬಿಡುಗಡೆ ಮಾಡಿದೆ, ಭೂಮಿ ಪೂಜೆಯನ್ನೂ ಮಾಡಿದೆ. ಅದನ್ನು ಪೂರ್ಣಗೊಳಿಸುವ ಕೆಲಸವನ್ನು ಬಿಜೆಪಿ ಮಾಡುತ್ತದೆ ಎಂದು ಅವರು ಹೇಳಿದ್ದಾರೆ..
ಹುತಾತ್ಮ ರೈತ ಈರಪ್ಪ ಕೊಡ್ಲಿಕೊಪ್ಪ ಅವರ ಪುತ್ಥಳಿ ನಿರ್ಮಾಣ ಮಾಡಲಾಗುತ್ತಿದೆ. ಜಾಗವನ್ನು ನೀಡಿದವರಿಗೆ ಧನ್ಯವಾದ. ಕೇಂದ್ರ ಸರ್ಕಾರರದ ಮನವೊಲಿಸಿ ಯೋಜನೆ ಜಾರಿ ಮಾಡುತ್ತೇವೆ ಎಂದವರು ಹೇಳಿದ್ದಾರೆ.
ಇನ್ನು, ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮೀಜಿ ಹಾಗೂ ಶಾಸಕ ಕಾಶಪ್ಪನ್ನವರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ. ಭಿನ್ನಾಭಿಪ್ರಾಯ ಬಗೆ ಹರಿಯಲಿ ಎನ್ನುವುದು ಪಂಚಮಸಾಲಿ ಸಮಾಜದ ಹೆಬ್ಬಯಕೆಯಾಗಿದೆ. ಯಾವ ಕಾರಣಕ್ಕೆ ಭಿನ್ನಾಭಿಪ್ರಾಯ ಬಂದಿದೆ ನನಗೆ ಗೊತ್ತಿಲ್ಲ. ಶ್ರೀಗಳಿಗೆ ಹಿಂಸೆಯಾಗಿದಕ್ಕೆ ಶ್ರೀಗಳು ಆಸ್ಪತ್ರೆಗೆ ದಾಖಲಾಗಿದ್ರು, ಆರೋಗ್ಯ ಸುಧಾರಿಸಿದೆ. ಸಮಾಜದ ಹಿರಿಯರು ಸೇರಿಕೊಡು ಸಂಧಾನ ಸಭೆ ಮಾಡಲು ನಿರ್ಧಾರ ಮಾಡಿದ್ದೇವೆ. ಶ್ರೀಗಳು ಹಾಗೂ ಕಾಶಪ್ಪನ್ನವರು ಎರಡು ಹೆಜ್ಜೆ ಹಿಂದೆ ಸರಿಯಬೇಕು. ಸಂಧಾನ ಆಗದಿದ್ದರೆ, ಮೂಲಪೀಠವನ್ನು ಅಲ್ಲಿ ಇಟ್ಟು ಬೇರೆಕಡೆ ಶಾಖಾಮಠವನ್ನು ಮಾಡುತ್ತೇವೆ. ಶೀಗಳಿಗೆ ನಾವು ಬೆನ್ನಲುಬಾಗಿ ನಿಲ್ಲುತ್ತೇವೆ ಎಂದು ಹೇಳಿದ್ದಾರೆ.
ಬಿಜೆಪಿ ಸರ್ಕಾರದಲ್ಲಿ ಬಹುದೊಡ್ಡ ಹೋರಾಟ ಶ್ರೀಗಳು ಮಾಡಿದ್ದರು. ಆಗ ನಾನು ಸರ್ಕಾರ ಹಾಗೂ ಸಮಾಜದ ಕೊಂಡಿಯಾಗಿ ಕೆಲಸ ಮಾಡಿದ್ದೆ. ಆಗ ಕಾಶಪ್ಪನ್ನವರ ನಮ್ಮ ಸರ್ಕಾರ ಬಂದ 24 ಗಂಟೆಯಲ್ಲಿ ಮೀಸಲಾತಿ ನೀಡುತ್ತೇವೆಂದು ಹೇಳಿದ್ದರು. ಅವರು ಕೆಲಸದ ಒತ್ತಡದಲ್ಲಿ 24 ಗಂಟೆಯನ್ನು ಮರೆತ್ತಿದ್ದಾರೆ ಎಂದು ಅಪಹಾಸ್ಯ ಮಾಡಿದ್ದಲ್ಲದೇ, ಈಗಲಾದರೂ ಮೀಸಲಾತಿ ಕೊಡಿಸಿದರೆ, ಸಮಾಜ ಅವರಿಗೆ ಋಣಿಯಾಗಿ ಇರುತ್ತೇವೆ ಎಂದು ಪಾಟೀಲ್ ಹೇಳಿದ್ದಾರೆ.