ಬೆಂಗಳೂರು : “ನಾನು ಎಂದಿಗೂ ಬೆನ್ನಿಗೆ ಚೂರಿ ಹಾಕಲ್ಲ. ನೇರವಾಗಿ ಹೋರಾಟ ಮಾಡುವವನು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಇಂದು ಮಾತನಾಡಿದ ಅವರು, “ನಾನು ಗುಂಪುಗಾರಿಕೆ ಮಾಡುವುದಿಲ್ಲ. ಎಲ್ಲರೂ ಗಮನಿಸಿರುವಂತೆ ದೆಹಲಿಗೆ ಹೋದರೂ ಒಬ್ಬನೇ ಹೋಗುತ್ತೇನೆ. 8-10 ಶಾಸಕರನ್ನು ಜೊತೆಯಲ್ಲಿ ಕರೆದುಕೊಂಡು ಹೋಗಬಹುದಿತ್ತು. ಅದು ದೊಡ್ಡ ವಿಚಾರವಲ್ಲ. ನಾನು ಅಧ್ಯಕ್ಷ ಸ್ಥಾನದಲ್ಲಿರುವಾಗ ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗಬೇಕು. 140 ಶಾಸಕರೂ ನಮ್ಮ ನಾಯಕರೇ. ಯಾರಿಗೂ ತಾರತಮ್ಯ ಮಾಡಲ್ಲ.
ಕುಮಾರಸ್ವಾಮಿಯವರ ಜೊತೆಯಲ್ಲೇ ನಿಷ್ಠೆಯಿಂದ ಕೆಲಸ ಮಾಡಿದ್ದೇನೆ. ಇದನ್ನು ಕುಮಾರಸ್ವಾಮಿಯವರು ಒಪ್ಪದೇ ಇರಬಹುದು, ನನ್ನ ನಿಷ್ಠೆ, ನನ್ನ ಆತ್ಮಸಾಕ್ಷಿ ಆ ದೇವರಿಗೆ ಗೊತ್ತಿದೆ. ಕುಮಾರಸ್ವಾಮಿಯವರ ಸರ್ಕಾರ ಉಳಿಸಲು ಕೊನೇ ದಿನದವರೆಗೂ ಎಷ್ಟು ಪ್ರಯತ್ನ ಮಾಡಿದ್ದೇನೆ ಎಂದು ಅವರ ತಂದೆಯವರಿಗೂ ತಿಳಿದಿದೆ. ಅವರು ತಮ್ಮ ಆಸೆಗೆ ಏನಾದರೂ ಮಾತಾಡಿಕೊಳ್ಳಲಿ, ನಾನು ಬೇಸರ ಮಾಡಿಕೊಳ್ಳಲ್ಲ. ನಾನೆಂದಿಗೂ ಬೆನ್ನಿಗೆ ಚೂರಿ ಹಾಕಲ್ಲ. ನೇರವಾಗಿ ಹೋರಾಟ ಮಾಡುವವ” ಎಂದರು.
ನನ್ನ ಹಾಗು ಸಿಎಂ ಮಧ್ಯೆ ಭಿನ್ನಾಭಿಪ್ರಾಯವಿಲ್ಲ: “ನನ್ನ ಹಾಗೂ ಸಿಎಂ ಸಿದ್ದರಾಮಯ್ಯನವರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಾವೆಲ್ಲರೂ ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ. ರಾಜ್ಯದ ಜನ ನಮ್ಮ ಮೇಲೆ ಬಹಳ ನಿರೀಕ್ಷೆ ಹೊಂದಿದ್ದು, ನಾವು ಅದಕ್ಕೆ ತಕ್ಕಂತೆ ಕೆಲಸ ಮಾಡಬೇಕು. 2028ರ ಚುನಾವಣೆ ನಮ್ಮ ಮುಂದಿನ ಗುರಿ” ಎಂದು ಹೇಳಿದರು.
ಕೆ.ಸಿ.ವೇಣುಗೋಪಾಲ್ ಅವರ ಜೊತೆಗಿನ ಮಾತುಕತೆಯ ಬಗ್ಗೆ ಕೇಳಿದಾಗ, “ನಾನು ಎಲ್ಲರ ಜೊತೆ ಚರ್ಚೆ ಮಾಡಿದ್ದು, ಏನು ಚರ್ಚೆ ಮಾಡಿದ್ದೇವೆ ಎಂದು ಮಾಧ್ಯಮಗಳ ಮುಂದೆ ಬಹಿರಂಗಪಡಿಸುವುದಿಲ್ಲ” ಎಂದು ತಿಳಿಸಿದರು.
ಡಿ.ಕೆ.ಶಿವಕುಮಾರ್ ಸೂಪರ್ ಸಿಎಂ ಎಂಬ ಬಿಜೆಪಿ ಟೀಕೆಗೆ, “ಬಿಜೆಪಿ ವಿರೋಧ ಪಕ್ಷವಾಗಿ ಏನಾದರೂ ಮಾತನಾಡಬೇಕಲ್ಲ?, ಬದುಕಿದ್ದೇವೆ ಎಂದು ತೋರಿಸಲು ಮಾತನಾಡುತ್ತಾರೆ. ಬಿಜೆಪಿಯವರ ಬಗ್ಗೆ ತಲೆಕೆಡಿಸಿಕೊಳ್ಳಲು ಆಗುತ್ತದೆಯೇ” ಎಂದು ತಿರುಗೇಟು ಕೊಟ್ಟರು.
ಇದನ್ನೂ ಓದಿ : ಇತಿಹಾಸ ಸೃಷ್ಟಿಸಿದ ರೋಹಿತ್-ಕೊಹ್ಲಿ.. ಸಚಿನ್, ದ್ರಾವಿಡ್ ದಾಖಲೆ ಧೂಳೀಪಟ



















