ನವದೆಹಲಿ: ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿನ ಎಲ್ಲಾ ಬೀದಿ ನಾಯಿಗಳನ್ನು ಆಶ್ರಯತಾಣಗಳಿಗೆ ಸ್ಥಳಾಂತರಿಸುವಂತೆ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶದ ಕುರಿತು ತೀವ್ರ ವಿವಾದ ಸೃಷ್ಟಿಯಾದ ಬೆನ್ನಲ್ಲೇ, ಈ ವಿಷಯವನ್ನು ಪರಿಶೀಲಿಸುವುದಾಗಿ ಬುಧವಾರ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಭರವಸೆ ನೀಡಿದ್ದಾರೆ. ಸುಪ್ರೀಂ ಕೋರ್ಟ್ ಸೋಮವಾರ ಹೊರಡಿಸಿದ್ದ ಆದೇಶಕ್ಕೆ ದೇಶಾದ್ಯಂತದ ಪ್ರಾಣಿಪ್ರಿಯರು ಮತ್ತು ಹಲವು ಗಣ್ಯರಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.
ಸೋಮವಾರ ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಆರ್. ಮಹಾದೇವನ್ ಅವರಿದ್ದ ಪೀಠವು, ಹೆಚ್ಚುತ್ತಿರುವ ನಾಯಿ ಕಡಿತ ಹಾಗೂ ರೇಬೀಸ್ ಪ್ರಕರಣಗಳನ್ನು ಉಲ್ಲೇಖಿಸಿ, ದೆಹಲಿಯ ವಸತಿ ಪ್ರದೇಶಗಳಿಂದ ಆದಷ್ಟು ಬೇಗ ಎಲ್ಲಾ ಬೀದಿ ನಾಯಿಗಳನ್ನು ಆಶ್ರಯತಾಣಗಳಿಗೆ ಸ್ಥಳಾಂತರಿಸಲು ಆದೇಶಿಸಿತ್ತು. “ಮಕ್ಕಳು ಮತ್ತು ವೃದ್ಧರು ಸುರಕ್ಷಿತವಾಗಿರಲು ನಾಯಿ-ಮುಕ್ತ ಪ್ರದೇಶವನ್ನು ಖಚಿತಪಡಿಸಿಕೊಳ್ಳಬೇಕು. ಇದು ಸಾರ್ವಜನಿಕ ಹಿತಾಸಕ್ತಿಗಾಗಿ ನೀಡುತ್ತಿರುವ ಆದೇಶವಾಗಿದ್ದು, ಯಾವುದೇ ಭಾವನೆಗಳಿಗೆ ಇಲ್ಲಿ ಅವಕಾಶವಿಲ್ಲ,” ಎಂದು ಸ್ಪಷ್ಟಪಡಿಸಿತ್ತು.
ಈ ಆದೇಶ ಹೊರಬಿದ್ದ ಬೆನ್ನಲ್ಲೇ, ನಿವಾಸಿಗಳ ಕಲ್ಯಾಣ ಸಂಘಗಳು ಇದನ್ನು ಸ್ವಾಗತಿಸಿದರೆ, ಪ್ರಾಣಿ ಹಕ್ಕುಗಳ ಕಾರ್ಯಕರ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಇಷ್ಟು ದೊಡ್ಡ ಪ್ರಮಾಣದ ಸ್ಥಳಾಂತರಕ್ಕೆ ನಗರಸಭೆಗಳಲ್ಲಿ ಹಣಕಾಸಿನ ಕೊರತೆಯಿದೆ ಎಂಬ ವಾದವೂ ಕೇಳಿಬಂದಿತ್ತು. ದೆಹಲಿಯಲ್ಲಿ ಶ್ವಾನಪ್ರಿಯರ ಪ್ರತಿಭಟನೆಯೂ ನಡೆದಿತ್ತು. ಹಲವು ಸೆಲೆಬ್ರಿಟಿಗಳು, ರಾಜಕಾರಣಿಗಳು ಕೂಡ ಸುಪ್ರೀಂ ಆದೇಶವನ್ನು ಕ್ರೌರ್ಯ ಎಂದು ಟೀಕಿಸಿದ್ದರು.
ಸಿಜೆಐ ಸೆಳೆದ ಹಿಂದಿನ ಆದೇಶ
ಇಂದು ಬೆಳಗ್ಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಮುಂದೆ ಈ ವಿಷಯವನ್ನು ಪ್ರಸ್ತಾಪಿಸಲಾಯಿತು. ಬೀದಿ ನಾಯಿಗಳ ಸ್ಥಳಾಂತರ ಮತ್ತು ಹತ್ಯೆಯನ್ನು ನಿಷೇಧಿಸುವ ಹಾಗೂ ಅಸ್ತಿತ್ವದಲ್ಲಿರುವ ಕಾನೂನುಗಳನ್ನು ಪಾಲಿಸುವಂತೆ ಸೂಚಿಸಿದ್ದ ಹಿಂದಿನ ನ್ಯಾಯಾಲಯದ ಆದೇಶದ ಬಗ್ಗೆ ವಕೀಲರೊಬ್ಬರು ಸಿಜೆಐ ಅವರ ಗಮನ ಸೆಳೆದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ಗವಾಯಿ, “ನಾನು ಇದನ್ನು ಪರಿಶೀಲಿಸುತ್ತೇನೆ” ಎಂದು ಹೇಳುವ ಮೂಲಕ, ಆದೇಶದ ಮರುಪರಿಶೀಲನೆಯ ಭರವಸೆ ಮೂಡಿಸಿದ್ದಾರೆ.
ಸುಪ್ರೀಂ ನ್ಯಾಯಮೂರ್ತಿ ಜೆ.ಕೆ. ಮಾಹೇಶ್ವರಿ ಅವರ ಪೀಠವು ಮೇ 2024ರಲ್ಲಿ ನೀಡಿದ್ದ ಆದೇಶವನ್ನು ವಕೀಲರು ಸಿಜೆಐ ಮುಂದೆ ಉಲ್ಲೇಖಿಸಿದ್ದಾರೆ. ಆ ಆದೇಶದ ಸಂದರ್ಭದಲ್ಲಿ, “ಎಲ್ಲಾ ಜೀವಿಗಳ ಬಗ್ಗೆ ಕರುಣೆ ತೋರುವುದು ಸಾಂವಿಧಾನಿಕ ಮೌಲ್ಯ” ಎಂದು ಹೇಳಿ, ಇದೇ ರೀತಿಯ ಅರ್ಜಿಗಳನ್ನು ಹೈಕೋರ್ಟ್‌ಗಳಿಗೆ ವರ್ಗಾಯಿಸಲಾಗಿತ್ತು.
ಆದೇಶಕ್ಕೆ ವ್ಯಾಪಕ ವಿರೋಧ
ಸೋಮವಾರ ನ್ಯಾಯಪೀಠ ನೀಡಿ ಆದೇಶಕ್ಕೆ ಸಮಾಜದ ಹಲವು ವಲಯಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಕೇಂದ್ರದ ಮಾಜಿ ಸಚಿವೆ ಹಾಗೂ ಪ್ರಾಣಿ ಹಕ್ಕುಗಳ ಕಾರ್ಯಕರ್ತೆ ಮನೇಕಾ ಗಾಂಧಿ ಅವರು ಈ ಆದೇಶವನ್ನು “ಅವ್ಯಾವಹಾರಿಕ, ಆರ್ಥಿಕವಾಗಿ ಅಸಮರ್ಥನೀಯ ಮತ್ತು ಪರಿಸರ ಸಮತೋಲನಕ್ಕೆ ಹಾನಿಕಾರಕ” ಎಂದು ಬಣ್ಣಿಸಿದ್ದರು. ಇದು ಆಕ್ರೋಶದಿಂದ ಕೊಟ್ಟಿರುವ ತೀರ್ಪು ಎಂದು ಹೇಳಿದ್ದ ಅವರು, ಈ ವಿಚಾರದಲ್ಲಿ ಪ್ರಧಾನಿ ಮೋದಿಯವರ ಮಧ್ಯಪ್ರವೇಶವನ್ನೂ ಕೋರಿದ್ದರು.
ಪ್ರಾಣಿಗಳ ಹಕ್ಕುಗಳ ಸಂಘಟನೆ ಪೆಟಾ, “ಈ ರೀತಿಯ ಸ್ಥಳಾಂತರವು ಅವೈಜ್ಞಾನಿಕ ಮತ್ತು ನಿಷ್ಪರಿಣಾಮಕಾರಿಯಾಗಿದೆ. ಇದರಿಂದ ನಾಯಿಗಳ ಸಂಖ್ಯೆ, ರೇಬೀಸ್ ಅಥವಾ ನಾಯಿ ಕಡಿತದ ಪ್ರಕರಣಗಳನ್ನು ತಡೆಯಲು ಸಾಧ್ಯವಿಲ್ಲ,” ಎಂದು ಹೇಳಿತ್ತು. ಬಾಲಿವುಡ್ ನಟ ಜಾನ್ ಅಬ್ರಹಾಂ ಕೂಡ ಆದೇಶವನ್ನು ಮರುಪರಿಶೀಲಿಸುವಂತೆ ಸಿಜೆಐಗೆ ತುರ್ತು ಮನವಿ ಸಲ್ಲಿಸಿದ್ದರು.



















