ಹುಬ್ಬಳ್ಳಿ: ಚನ್ನಪಟ್ಟಣದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸಿ.ಪಿ. ಯೋಗೇಶ್ವರ್ ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಬೆಂಗಳೂರಿನಿಂದ ಹುಬ್ಬಳ್ಳಿಗೆ ತೆರಳಿ ಸಭಾಪರಿ ಬಸವರಾಜ್ ಹೊರಟ್ಟಿ ಅವರಿಗೆ ರಾಜೀನಾಮೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಾನು ವಿಪ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಆದರೆ, ಬಿಜೆಪಿ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ. ಹೀಗಾಗಿ ನಾನು ಚನ್ನಪಟ್ಟಣದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದ್ದಾರೆ.
ಸಭಾಪತಿ ಬಸವರಾಜ ಹೊರಟ್ಟಿ ರಾಜೀನಾಮೆ ಅಂಗೀಕರಿಸಿದ್ದಾರೆ. ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ಚುನಾವಣೆಗೆ ಸ್ಪರ್ಧಿಸಬೇಕಾದರೆ ರಾಜೀನಾಮೆ ನೀಡಬೇಕಾಗಿರುತ್ತದೆ. ಹೀಗಾಗಿ ಪರಿಷತ್ ನಾಮನಿರ್ದೇಶಿತ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಹೇಳಿದ್ದಾರೆ.
ವಿಧಾನಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ ಅಷ್ಟೇ. ನಾನಿನ್ನೂ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿಲ್ಲ. ನಾನು ಎನ್ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕೆಂದು ಬಯಕೆಯಿದೆ. ಬಿಜೆಪಿಯಲ್ಲಿ 19 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ. ನನ್ನ ಸೇವೆ ಪರಿಗಣಿಸಿ ಅವಕಾಶ ನೀಡಿ ಎಂದು ಮನವಿ ಮಾಡಿದ್ದೇನೆ. ಜೆಡಿಎಸ್ನಿಂದ ಸ್ಪರ್ಧೆಗೆ ಕಾರ್ಯಕರ್ತರ ಅಪಸ್ಪರ, ಗೊಂದಲವಿತ್ತು. ಹೀಗಾಗಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಚಿಂತನೆ ನಡೆಸಿದ್ದೇನೆ ಎಂದಿದ್ದಾರೆ.
ಈ ವೇಳೆ ಊಹಾಪೋಹ ಇರುವುದು ಸಹಜ. ಆದರೆ, ನನಗೆ ಆ ಕುರಿತು ಬೇಸರವಿಲ್ಲ. ನಾನಿನ್ನೂ ಬಿಜೆಪಿಯಲ್ಲೇ ಇದ್ದೇನೆ. ನಾಯಕರು ಮಾತನಾಡುತ್ತಿದ್ದಾರೆ ಎಂದಿದ್ದಾರೆ.