ಸ್ಮಶಾನಕ್ಕೆ ಹೋಗುವ ದಾರಿ ಬಂದ್ ಮಾಡಿ, ರುದ್ರಭೂಮಿಯನ್ನು ನಾಶಮಾಡಿ ಸಮುದ್ರ ಕಿನಾರೆಗೆ ಸಂಪರ್ಕ ಕಡಿತ ಮಾಡಲಾಗಿದೆ ಎಂದು ಆರೋಪಿಸಿ ಬೈಂದೂರು ತಾಲ್ಲೂಕಿನ ಗುಜ್ಜಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ.
ಸ್ಮಶಾನಕ್ಕೆ ಹೊಂದಿಕೊಂಡಿರುವ ಜಾಗವನ್ನು ಖಾಸಗಿಯವರು ಖರೀದಿ ಮಾಡಿ, ಅಲ್ಲಿ ಕಾನೂನು ಉಲ್ಲಂಘನೆ ಮಾಡಿರುವುದಕ್ಕಾಗಿ ಸ್ಥಳಿಯರು ಪ್ರತಿಭಟನೆಗೆ ಇಳಿದಿದ್ದರು. ಹೀಗಾಗಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪ್ರತಿಭಟನಾಕಾರರಿಂದ ಮೂರು ಬೇಡಿಕೆಗಳನ್ನು ಮುಂದಿಡಲಾಗಿತ್ತು.
1. ಸ್ಮಶಾನ ಅದೇ ಸ್ಥಳದಲ್ಲಿ ಇರಬೇಕು. ಖಾಸಗಿಯವರಿಗೆ ಜಾಗ ನೀಡಬಾರದು.
2. ಅದಕ್ಕೆ ಹೊಂದಿಕೊಂಡಿರುವ ಜಾಗವನ್ನು ಅಭಿವೃದ್ಧಿ ಮಾಡುವಂತಿಲ್ಲ. ಈಗಾಗಲೇ ರೆಸಾರ್ಟ್ ನಿರ್ಮಿಸಲು ಕಾನೂನು ಬಾಹಿರವಾಗಿ ಕಂಪೌಂಡ್ ನಿರ್ಮಿಸಲಾಗಿದೆ. ಅದನ್ನು ಕೂಡಲೇ ತೆರವುಗೊಳಿಸಬೇಕು.
3. ಸಮುದ್ರ ಕಿನಾರೆಗೆ ತೆರಳಲು ಅನಾದಿ ಕಾಲದಿಂದಲೂ ಪಕ್ಕದಲ್ಲಿರುವ ಪಟ್ಟಾ ಜಾಗದಲ್ಲಿ ರಸ್ತೆಯಿದ್ದು, ಅದರ ಸಂಪರ್ಕ ಕಡಿತವಾಗದಂತೆ ನೋಡಿಕೊಳ್ಳಿ ಎಂದು ಮನವಿಯಲ್ಲಿ ಸಲ್ಲಿಸಲಾಗಿತ್ತು.
ಈ ವಿಷಯವಾಗಿ ಉಡುಪಿ ಜಿಲ್ಲಾಧಿಕಾರಿ ಪರ ಅಸಿಸ್ಟೆಂಟ್ ಕಮಿಷನರ್ ರವೀಂದ್ರ ಮಾತನಾಡಿ, ಸ್ಮಶಾನವು ಸರ್ಕಾರಿ ಜಾಗದಲ್ಲಿದ್ದು, ಅದನ್ನು ಯಾರೂ ಆಕ್ರಮಿಸುವುದಿಲ್ಲ ಎಂದು ಭರವಸೆ ನೀಡಿದ್ದಾರೆ.
ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಮಾತನಾಡಿ, ತನ್ನ ಕ್ಷೇತ್ರದ ಜನರಿಗಾದ ಅನ್ಯಾಯವಾದರೆ ಸುಮ್ಮನೆ ಬಿಡುವುದಿಲ್ಲ. ಕೂಡಲೇ ನಿಯಮ ಮೀರಿ ಕಟ್ಟಿದ್ದ ಕಂಪೌಂಡ್ ತೆರವುಗೊಳಿಸಬೇಕು ಎಂದು ಸೂಚಿಸಿದ ಅವರು, ಸ್ಥಳೀಯರ ಮೂರು ಬೇಡಿಕೆಗಳಿಗೆ ಸಮ್ಮತಿ ಸೂಚಿಸಿದರು. ನನ್ನ ಕ್ಷೇತ್ರದಲ್ಲಿ ಏನು ಬೇಕಾದರೂ ಮಾಡಬಲ್ಲೆ ಎಂಬ ಅಹಂಕಾರ ತೋರಿಸಿದರೆ, ಯಾವ ವ್ಯವಹಾರವೂ ನಡೆಯುವುದಿಲ್ಲ. ಗುಜ್ಜಾಡಿ ಜನರಿಗೆ ಧಮ್ಕಿ ಹಾಕಿದರೆ, ಅಟ್ರಾಸಿಟಿ ಕೇಸ್ ಹಾಕಿದರೆ ಇಡೀ ಬೈಂದೂರು ಜನತೆಯನ್ನು ತಂದು ನಿಲ್ಲಿಸುತ್ತೇನೆ ಎಂದು ನಿಯಮ ಉಲ್ಲಂಘಿಸಿದವರಿಗೆ ಎಚ್ಚರಿಕೆ ನೀಡಿದರು.



















