ಚಿತ್ರದುರ್ಗ: ಸರ್ಕಾರದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನು ಸ್ವಾಗತ ಮಾಡುತ್ತೇನೆ ಎಂದು ಭೋವಿ ಪೀಠದ ಇಮ್ಮಡಿ ಸಿದ್ಧರಾಮೇಶ್ವರ ಶ್ರೀಗಳು ಹೇಳಿದರು.
ಈ ಬಗ್ಗೆ ಚಿತ್ರದುರ್ಗದಲ್ಲಿ ಮಾತನಾಡಿದ ಶ್ರೀಗಳು, ಜನರಲ್ಲಿ ದಲಿತ ಹಾಗೂ ಬಲಿತ ಎನ್ನುವ ವರ್ಗಗಳಿವೆ. ಬದುಕು ಕಟ್ಟಿಕೊಳ್ಳಲು ಹಲವಾರು ಜನ ಕೂಲಿ ಕೆಲಸಕ್ಕೆ ಹೋಗುತ್ತಾರೆ. ಹಬ್ಬದ ಹಿನ್ನೆಲೆ ಅವರೆಲ್ಲ ವಾಪಸ್ ಮನೆಗೆ ಬಂದಿರುತ್ತಾರೆ. ಉತ್ತರ ಕರ್ನಾಟಕದಲ್ಲಿ ದೀಪಾವಳಿ ದೊಡ್ಡ ಹಬ್ಬವಾಗಿದೆ. ಆ ವೇಳೆ ಅವರು ತಮ್ಮ ಊರುಗಳಿಗೆ ಮರಳುತ್ತಾರೆ. ಒಂದಿಷ್ಟು ಜನ ಸಮೀಕ್ಷೆಗೆ ಸಿಗದೇ ಇರಬಹುದು. ಸರ್ಕಾರಕ್ಕೆ ಈ ಅಂಕಿ-ಅಂಶ ಸಮ ಸಮಾಜ ನಿರ್ಮಾಣಕ್ಕೆ ಸಹಾಯಕವಾಗುತ್ತದೆ. ವರದಿ ಯಶಸ್ಸಿಗೆ ಜನತೆ ಸಹಕರಿಸಬೇಕು. 7 ಕೋಟಿ ಜನಸಂಖ್ಯೆಯ ಮಾಹಿತಿ ಸಿಗುವವರೆಗೂ ಸಮೀಕ್ಷೆ ಆಗಬೇಕು. ನಮ್ಮ ರಾಜ್ಯದಲ್ಲಿ ಕಾಫಿ ಎಸ್ಟೇಟ್, ಬಹುಮಹಡಿ ಕಟ್ಟಡ ಕೆಲಸಗಾರರನ್ನು ಸಮೀಕ್ಷೆಗೆ ಒಳಪಡಿಸಿ.
ಈ ಹಿಂದೆ ಸಮೀಕ್ಷೆಯಲ್ಲಿ ಪರಿಶಿಷ್ಟ ಜಾತಿಯ ಜನತೆಯ ಸಂಖ್ಯೆ ಕಡಿಮೆ ತೋರಿಸಲಾಗಿದೆ. ಭೋವಿ ಸಮಾಜ 1 ಕೋಟಿ 8 ಲಕ್ಷ ಇರುವಂಥದ್ದು. ನಾಗಮೋಹನ್ ದಾಸ್ ವರದಿಯಂತೆ ಭೋವಿ ಸಮುದಾಯದ ಸಂಖ್ಯೆ ಕಡಿಮೆ ತೋರಿಸಿದ್ದಾರೆ. ಮಹಿಳೆಯರ ಸಂಖ್ಯೆಗಿಂತ ಪುರುಷರ ಸಂಖ್ಯೆ ಕಡಿಮೆ ತೋರಿಸಿದ್ದರು. ಈ ಸಮೀಕ್ಷೆಯಲ್ಲಿ ಲೋಪದೋಷ ಪರಿಹಾರಕ್ಕೆ ಅವಕಾಶ ಇದೆ. ಭೋವಿ ಸಮುದಾಯ ಹಿಂದೂ ಅಡಿಯಲ್ಲಿ ಬರುವಂಥದ್ದು. ಧರ್ಮ ಹಿಂದೂ, ಜಾತಿ ಭೋವಿ, ಉಪಜಾತಿ ಒಡ್ಡರೆಂದು ನಮೂದಿಸಿ ಎಂದು ಭೋವಿ ಸಮುದಾಯದ ಜನರಿಗೆ ಸಿದ್ಧರಾಮೇಶ್ವರ ಶ್ರೀಗಳು ಕರೆ ನೀಡಿದರು.