ಕೊಪ್ಪಳ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಿಗೆ ಕನ್ನಡ ಬರುವುದಿಲ್ಲ ಎಂಬ ವಿಡಿಯೋಗೆ ಸ್ವತಃ ಶಿವರಾಜ ತಂಗಡಗಿ ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ನಾನು ತಪ್ಪಾಗಿ ಬರೆದಿಲ್ಲ. ಬೆರೆಯುವುದು ವಿಳಂಬವಾಗಿದೆ. ನನ್ನ ಮನಸ್ಸಿನಲ್ಲಿ ಬೇರೆ ಪದ ಬರಿಯಬೇಕು ಎಂದು ಚಿಂತಿಸುತ್ತಿದ್ದೆ. ಅಷ್ಟರಲ್ಲಿ ಅಲ್ಲಿದ್ದವರು ಶುಭವಾಗಲಿ ಎಂದು ಬರೆಯುವಂತೆ ಒತ್ತಾಯಿಸಿದರು. ಈ ಗೊಂದಲದಿಂದಾಗಿ ಬರೆಯುವುದು ವಿಳಂಬವಾಯಿತು. ಭ ಅಕ್ಷರಕ್ಕೆ ಕೊಂಬು ಕೊಡುವುದು ತಪ್ಪಾಯಿತು ಎಂದು ಹೇಳಿದ್ದಾರೆ.
ತಪ್ಪಾಗಿರುವುದನ್ನು ಹೇಳಿದರೆ ಒಪ್ಪಿಕೊಳ್ಳುತ್ತೇನೆ. ಅದು ಬಿಟ್ಟು ತಂಗಡಗಿಗೆ ಕನ್ನಡ ಬರೆಯಲು ಬರುವುದಿಲ್ಲ ಎಂದು ಹೇಳಿದರೆ ನಾನು ಒಪ್ಪಿಕೊಳ್ಳುವುದಿಲ್ಲ. ಬಿಜೆಪಿಗೆ ತಂಗಡಗಿ ವಿರುದ್ಧ ಯಾವುದೇ ಆರೋಪ ಸಿಕ್ಕಿರಲಿಲ್ಲ. ಹೇಗಾದರೂ ಮಾಡಿ ತಂಗಡಗಿ ಬಗ್ಗೆ ಅಪಪ್ರಚಾರ ಮಾಡಬೇಕು ಎಂಬ ಕಾರಣಕ್ಕೆ ಈ ರೀತಿ ಮಾಡಿದ್ದಾರೆ. ನಾನು ಬಿಎಸ್ಸಿ ವದವಿಧರ. ಕನ್ನಡ, ಇಂಗ್ಲಿಷ್ ಎರಡೂ ಭಾಷೆ ನನಗೆ ಬರುತ್ತದೆ. ಇದನ್ನು ವೈರಲ್ ಮಾಡಿದವನ ಮರ್ಯಾದೆ ಹಾಳು ಮಾಡಲು ನನಗೆ ಇಷ್ಟವಿಲ್ಲ ಎಂದು ಪರೋಕ್ಷವಾಗಿ ಮಾಜಿ ಶಾಸಕ ಬಸವರಾಜ್ ದಡೇಸೂಗೂರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.