ಹಾವೇರಿ: ನಾನು ಶಿಗ್ಗಾಂವಿ ಕ್ಷೇತ್ರದ ಉಪ ಚುನಾವಣೆಗೆ ಯಾರಿಗೆ ಟಿಕೆಟ್ ಕೊಡಿಸುವ ಭರವಸೆ ನೀಡಿಲ್ಲ. ಯಾರಿಗೂ ಅನ್ಯಾಯ ಮಾಡಿಲ್ಲ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸದ ಬಸವರಾಜ ಬೊಮ್ಮಾಯಿ ಮಾತುಕೊಟ್ಟು ತಪ್ಪಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ನಾನು ಯಾರಿಗೂ ಮಾತು ಕೊಟ್ಟಿರಲಿಲ್ಲ. ಸುಮಾರು 50 ಜನ ಆಕಾಂಕ್ಷಿಗಳು ಇದ್ದರು, ಎಲ್ಲರಿಗೂ ಪಕ್ಷದ ನಿರ್ಧಾರಕ್ಕೆ ಬದ್ದನಾಗಿರಬೇಕು ಎಂದು ಹೇಳಿದ್ದೆ. ಇದು ನನ್ನ ನಿರ್ಣಯ ಅಲ್ಲಾ, ಪಕ್ಷದ ನಿರ್ಣಯ ಎಂದಿದ್ದಾರೆ.
ನನ್ನ ಮಗನನ್ನು ನಿಲ್ಲಿಸಲು ಆಸಕ್ತಿ ಇರಲಿಲ್ಲ. ಕೊನೆಯ ಘಳಿಗೆವರಿಗೂ ಬೇಡ ಅಂತಾ ಹೇಳಿದ್ದೇನೆ. ಅಂತಿಮವಾಗಿ ಹೈಕಮಾಂಡ್ ಟಿಕೆಟ್ ನೀಡಿದೆ. ಗೆಲ್ಲುವ ದೃಷ್ಟಿಯಿಂದ ಪಕ್ಷ ಮಣೆ ಹಾಕಿದೆ. ನಾನು ಯಾವತ್ತೂ ನನ್ನ ಕಾರ್ಯಕರ್ತರಿಗೆ ಅನ್ಯಾಯ ಮಾಡಿಲ್ಲ. ಅವರಿಗೆ ಕ್ಯಾಬಿನೆಟ್ ಸ್ಥಾನ ನೀಡಿದ್ದೇನೆ. ಅಸಮಾಧಾನಿತರೊಂದಿಗೆ ಮಾತನಾಡುತ್ತೇನೆ ಎಂದಿದ್ದಾರೆ.
ಸಿ.ಪಿ. ಯೋಗೇಶ್ವರ್ ಸ್ಪರ್ಧೆ ಬಗ್ಗೆ ಮಾತನಾಡಿರುವ ಅವರು, ಯೋಗೇಶ್ವರ್ ಅವರ ಮನವೊಲಿಸಲು ಪ್ರಯತ್ನ ನಡೆದಿತ್ತು. ರಾಷ್ಟ್ರೀಯ ವರಿಷ್ಟರು ಮಾತುಕತೆ ಮಾಡಿ ಮನವೊಲಿಸಲು ಕಾರ್ಯ ಮಾಡುತ್ತಾರೆ. ಎಲ್ಲವೂ ಸರಿಯಾಗುತ್ತದೆ. ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಅವರ ಕ್ಷೇತ್ರ ಆಗಿದ್ದು, ಅವರಿಬ್ಬರೂ ಮಾತುಕತೆ ಮಾಡಿಕೊಂಡು ಹೊಂದಾಣಿಕೆ ಆಗಬೇಕಿತ್ತು ಎಂದಿದ್ದಾರೆ.