ನವದೆಹಲಿ: ಮೇಘಾಲಯ ಹನಿಮೂನ್ ಮರ್ಡರ್ ಕೇಸಿಗೆ ಸಂಬಂಧಿಸಿದ ಹೊಸ ಹೊಸ ವಿಚಾರಗಳು ಬಹಿರಂಗವಾಗುತ್ತಿವೆ. ಪತಿ ರಾಜಾ ರಘುವಂಶಿಯನ್ನು ಕೊಂದಿರುವ ಆರೋಪದಲ್ಲಿ ಪೊಲೀಸರ ಅತಿಥಿಯಾಗಿರುವ ಸೋನಮ್ ರಘುವಂಶಿ ತನ್ನ ಮದುವೆಯಾದ ಮೂರೇ ದಿನಗಳಲ್ಲಿ ಪ್ರಿಯಕರನ ಜೊತೆಗೆ ಸೇರಿ ಪತಿಯ ಕೊಲೆಗೆ ಸಂಚು ರೂಪಿಸಿದ್ದಳು ಎಂಬ ವಿಚಾರ ಬೆಳಕಿಗೆ ಬಂದಿದೆ.
ಪ್ರಿಯಕರ ರಾಜ್ ಕುಶ್ವಾಹಾ ಜೊತೆಗೆ ಸೋನಮ್ ನಡೆಸಿದ ಚಾಟ್ ವಿವರವನ್ನು ಪೊಲೀಸರು ಕಲೆಹಾಕುತ್ತಿದ್ದು, ಅದರಲ್ಲೂ ಕೆಲವು ಆಘಾತಕಾರಿ ಅಂಶಗಳು ಹೊರಬಿದ್ದಿವೆ. ಒಂದು ಸಂದೇಶದಲ್ಲಿ ಸೋನಮ್, “ಪತಿ ರಾಜಾ ರಘುವಂಶಿ ನನ್ನನ್ನು ಸಮೀಪಿಸುವುದು, ನನ್ನೊಂದಿಗೆ ಸಲುಗೆ ಬೆಳೆಸಿಕೊಳ್ಳುತ್ತಿರುವುದು ನನಗೆ ಇಷ್ಟವಾಗುತ್ತಿಲ್ಲ” ಎಂದು ಪ್ರಿಯಕರ ಕುಶ್ವಾಹಾನಿಗೆ ತಿಳಿಸಿದ್ದಳು.
ಅಲ್ಲದೇ, ನಾನು ಮದುವೆಗೂ ಮುನ್ನವೇ ಅವನಿಂದ ಆದಷ್ಟು ಅಂತರ ಕಾಯ್ದುಕೊಂಡು ಬಂದಿದ್ದೇನೆ ಎಂದೂ ಆಕೆ ಕುಶ್ವಾಹಾಗೆ ಸಂದೇಶ ಕಳುಹಿಸಿದ್ದಳು. ಮದುವೆ ಮುಗಿಯುತ್ತಿದ್ದಂತೆಯೇ ಪತಿಯನ್ನು ಕೊಲ್ಲಲು ಸಂಚು ರೂಪಿಸುವುದಾಗಿಯೂ ಆಕೆ ತಿಳಿಸಿದ್ದಳು ಎಂದು ತಿಳಿದುಬಂದಿದೆ. ಆರೋಪಿಗಳು ರಾಜಾ ರಘುವಂಶಿಯನ್ನು ಕೊಲ್ಲಲು ಉದ್ದೇಶಪೂರ್ವಕವಾಗಿಯೇ ದೂರದ ಮೇಘಾಲಯವನ್ನು ಆಯ್ಕೆ ಮಾಡಿಕೊಂಡಿದ್ದರು ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ರಘುವಂಶಿಯ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದ ಆರೋಪಿ ಕುಶ್ವಾಹಾ
ಈ ಕೊಲೆಯಲ್ಲಿ ತಾವು ಭಾಗಿಯಾಗಿರುವ ಬಗ್ಗೆ ಯಾರಿಗೂ ಅನುಮಾನ ಮೂಡಬಾರದು ಎಂಬ ಕಾರಣಕ್ಕೆ ಸೋನಮ್ ಪ್ರಿಯಕರ ಕುಶ್ವಾಹಾ ಇತ್ತೀಚೆಗೆ ನಡೆದಿದ್ದ ರಾಜಾ ರಘುವಂಶಿಯ ಅಂತ್ಯಸಂಸ್ಕಾರದಲ್ಲೂ ಭಾಗಿಯಾಗಿದ್ದರು. ಮಗಳ ನಾಪತ್ತೆ ಹಾಗೂ ಅಳಿಯನ ಸಾವಿನಿಂದ ಆಘಾತಗೊಂಡಿದ್ದ ಸೋನಮ್ ತಂದೆಯನ್ನು ಕುಶ್ವಾಹಾ ಸಂತೈಸುತ್ತಿರುವ ವಿಡಿಯೋವನ್ನು ರಘುವಂಶಿಯವರ ಸೋದರಿ ಬಹಿರಂಗಪಡಿಸಿದ್ದಾರೆ. ಇದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮೇ 10ರಂದು ರಾಜಾ ರಘುವಂಶಿಯನ್ನು ಮದುವೆಯಾಗಿದ್ದ ಸೋನಮ್ ಮೇ 21ರಂದು ಹನಿಮೂನ್ ಗೆಂದು ಮೇಘಾಲಯಕ್ಕೆ ತೆರಳಿದ್ದರು. ಅಲ್ಲೇ ಸೋನಮ್ ತನ್ನ ಪ್ರಿಯಕರ ಹಾಗೂ ಆತನ ಸಹಚರರೊಂದಿಗೆ ಸೇರಿ ಪತಿ ರಘುವಂಶಿಯನ್ನು ಕೊಂದಿದ್ದಳು ಎಂದು ಆರೋಪಿಸಲಾಗಿದೆ.