ನ್ಯೂಯಾರ್ಕ್/ಬೆಂಗಳೂರು: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಶವವಾಗಿ ಪತ್ತೆಯಾದ ಬೆಂಗಳೂರು ಮೂಲದ ಪ್ರತಿಭಾವಂತ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ (22) ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಹೊಸ ಮಾಹಿತಿಯೊಂದು ಲಭ್ಯವಾಗಿದೆ. ಫೆ.9ರಂದು ನಾಪತ್ತೆಯಾಗಿದ್ದ ಸಾಕೇತ್ ಅವರ ಮೃತದೇಹ ಲೇಕ್ ಅಂಜಾ ಪ್ರದೇಶದಲ್ಲಿ ಪತ್ತೆಯಾದ ಬೆನ್ನಲ್ಲೇ ಸಾಕೇತ್ ಅವರ ಕುರಿತು ಅವರ ರೂಮ್‌ಮೇಟ್ ಬನೀತ್ ಸಿಂಗ್ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಕೆಮಿಕಲ್ ಅಂಡ್ ಬಯೋಮಾಲಿಕ್ಯುಲರ್ ಇಂಜಿನಿಯರಿಂಗ್ ಓದುತ್ತಿದ್ದ ಸಾಕೇತ್, ಕಳೆದ ಎರಡು ವಾರಗಳಿಂದ ತೀವ್ರ ಮಾನಸಿಕ ಒತ್ತಡದಲ್ಲಿದ್ದರು ಎನ್ನಲಾಗಿದೆ. ಅವರ ರೂಮ್‌ಮೇಟ್ ಬನೀತ್ ಸಿಂಗ್ ಅವರ ಪ್ರಕಾರ, ಸಾಕೇತ್ ಕಳೆದ 15 ದಿನಗಳಿಂದ ಕೇವಲ ಬಿಸ್ಕೆಟ್ ಮತ್ತು ಚಿಪ್ಸ್ ತಿಂದು ಬದುಕುತ್ತಿದ್ದ. ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ ಮತ್ತು ಸರಿಯಾಗಿ ನಿದ್ರಿಸುತ್ತಿರಲಿಲ್ಲ. ಜನವರಿ 21 ರಂದು ಲೇಕ್ ಅಂಜಾಗೆ ಬರುವಂತೆ ಬನೀತ್‌ನನ್ನು ಸಾಕೇತ್ ಕರೆದಿದ್ದ. ಆದರೆ ಸೋಮಾರಿತನದಿಂದ ಬನೀತ್ ಹೋಗಿರಲಿಲ್ಲ. ಅದೇ ಸ್ಥಳದಲ್ಲಿಯೇ ಸಾಕೇತ್ ಕೊನೆಯುಸಿರೆಳೆದಿರುವುದು ಈಗ ಬನೀತ್ ಅವರಲ್ಲಿ ತೀವ್ರ ಅಪರಾಧೀ ಪ್ರಜ್ಞೆ ಮೂಡಿಸಿದೆ.
ಬಾತ್‌ರೋಬ್ ಧರಿಸಿ ತರಗತಿಗೆ ಹೋಗಿದ್ದ ಸಾಕೇತ್
ಸಾಕೇತ್ ಅವರ ಮಾನಸಿಕ ಸ್ಥಿತಿ ಎಷ್ಟು ಹದಗೆಟ್ಟಿತ್ತೆಂದರೆ, ಒಮ್ಮೆ ಅವರು ಕೆಂಪು ಬಣ್ಣದ ಬಾತ್‌ರೋಬ್ ಧರಿಸಿಯೇ ತರಗತಿಗೆ ಹೋಗಿ, ನಂತರ ಮರಳಿದ್ದ. ಇದನ್ನು ಕಂಡು ನನಗೆ ಅಚ್ಚರಿಯಾಗಿತ್ತು. ಆದರೆ, ಅಂದು ಸಾಕೇತ್, “ಐ ಡೋಂಟ್ ಕೇರ್. ನಾನು ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳುವುದನ್ನು ಬಿಟ್ಟಿದ್ದೇನೆ. ನನಗೆ ಚಳಿಯಾಗುತ್ತಿದೆ ಮತ್ತು ಬೇರೆಯವರು ನನ್ನ ಬಗ್ಗೆ ಏನು ಯೋಚಿಸುತ್ತಾರೆ ಎಂಬುದು ನನಗೆ ಈಗ ಮುಖ್ಯವಲ್ಲ” ಎಂದು ಸಾಕೇತ್ ಹೇಳಿದ್ದ. ಇದನ್ನು ಅವನು ತಮಾಷೆಯಾಗಿ ಹೇಳುತ್ತಿದ್ದಾರೆ ಎಂದು ನಾನು ಭಾವಿಸಿದ್ದೆ. ಆದರೆ, ಆ “ನಿರ್ಲಕ್ಷ್ಯ”ವೇ ಅವನ ಸಾವಿನ ಮುನ್ಸೂಚನೆಯಾಗಿತ್ತು ಎಂದು ಬನೀತ್ ಈಗ ನೆನಪಿಸಿಕೊಂಡಿದ್ದಾರೆ.
ಬೆಂಗಳೂರಿನ ಪ್ರತಿಭೆ, ಐಐಟಿ ಮದ್ರಾಸ್ ಹಳೆಯ ವಿದ್ಯಾರ್ಥಿ
ಮೂಲತಃ ಕರ್ನಾಟಕದವರಾದ ಸಾಕೇತ್ ಶ್ರೀನಿವಾಸಯ್ಯ ಅವರು ಬೆಂಗಳೂರಿನ ಶ್ರೀ ವಾಣಿ ಶಿಕ್ಷಣ ಕೇಂದ್ರದಲ್ಲಿ ಶಾಲಾ ಶಿಕ್ಷಣ ಮುಗಿಸಿ, ಐಐಟಿ ಮದ್ರಾಸ್‌ನಲ್ಲಿ ಪದವಿ ಪಡೆದಿದ್ದರು. ಅವರು ಹೈಪರ್ ಲೂಪ್‌ಗೆ ಸಂಬಂಧಿಸಿದ ‘ಮೈಕ್ರೋಚಾನಲ್ ಕೂಲಿಂಗ್ ಸಿಸ್ಟಮ್’ ಸಂಶೋಧನೆಯಲ್ಲಿ ಪೇಟೆಂಟ್ ಹೊಂದಿದ್ದ ಅಪ್ರತಿಮ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರು. ಅವರ ಸಾವಿನ ಹಿನ್ನೆಲೆಯಲ್ಲಿ ಭಾರತೀಯ ರಾಯಭಾರ ಕಚೇರಿಯು ಕುಟುಂಬಕ್ಕೆ ನೆರವು ನೀಡುತ್ತಿದ್ದು, ಮೃತದೇಹವನ್ನು ಭಾರತಕ್ಕೆ ತರಲು ವ್ಯವಸ್ಥೆ ಮಾಡುತ್ತಿದೆ.
ಇದನ್ನೂ ಓದಿ : ಇನ್‌ಸ್ಟಾಗ್ರಾಮ್ ಪ್ರೇಮ ಕೊಲೆಯಲ್ಲಿ ಅಂತ್ಯ | ಪ್ರಿಯಕರನ ಮನೆಯ ವಾಟರ್ ಟ್ಯಾಂಕ್‌ನಲ್ಲಿ ಶವವಾಗಿ ಪತ್ತೆಯಾದ ಯುವತಿ!



















