ಬೆಳಗಾವಿ: ಕೆಲವೇ ಜನರಿಂದ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ ಎಂಬುದನ್ನು ನಾನು ಕೂಡಾ ಒಪ್ಪುವುದಿಲ್ಲ. ಎಲ್ಲವೂ ನನ್ನಿಂದಲೇ ಆಗಿದೆ ಎನ್ನುವುದು ಬಹಳ ತಪ್ಪು ಎಂದು ಪರೋಕ್ಷವಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ಗೆ ಸಚಿವ ಸತೀಶ್ ಜಾರಕಿಹೊಳಿ ಟಾಂಗ್ ಕೊಟ್ಟಿದ್ದಾರೆ.
ಬೆಳಗಾವಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಕ್ಷ ಅಧಿಕಾರಕ್ಕೆ ಬರಲು ಬಹಳಷ್ಟು ಜನ ಪ್ರತ್ಯಕ್ಷ, ಪರೋಕ್ಷವಾಗಿ ದುಡಿದಿದ್ದಾರೆ. 1960ರಲ್ಲಿ ತೇನ್ಸಿಂಗ್ ಹಿಮಾಲಯ ಪರ್ವತ ಏರಿದಾಗ ಇಡೀ ಜಗತ್ತಿನ ಎಲ್ಲ ಪತ್ರಿಕೆಗಳು ತೇನ್ಸಿಂಗ್ ಹಿಮಾಲಯ ಏರಿದರು ಎಂದು ಬರೆದರು. ಅವರ ಜೊತೆಗೆ ಇನ್ನೂ 14 ಜನರಿದ್ದರು. ಅವರ ಹೆಸರು ಬರಲಿಲ್ಲ. ಇದೂ ಕೂಡಾ ಹಾಗೇ ಆಗಿದೆ ಎಂದಿದ್ದಾರೆ.
ಪಕ್ಷ ಅಧಿಕಾರಕ್ಕೆ ಬರಲು ಎಲ್ಲರ ಸಹಕಾರವಿದೆ. ಮೊದಲ ಬಾರಿ ಆರಿಸಿ ಬಂದವರೂ ಸೇರಿ ಬಹಳಷ್ಟು ಶಾಸಕರು ಸಂಕಷ್ಟದಲ್ಲಿದ್ದಾರೆ. ಪಕ್ಷ, ಶಾಸಕರು ಮತ್ತು ಕಾರ್ಯಕರ್ತರ ಶ್ರಮದಿಂದ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದೆ ಎನ್ನುವುದನ್ನು ಗಮನಿಸಬೇಕು. ಎಲ್ಲರಿಗೂ ಅಷ್ಟೇ ಪ್ರಾಮುಖ್ಯತೆ ಸಿಗಬೇಕು. ಎಲ್ಲರ ಸಹಕಾರವಿದೆ. ಅಧಿಕಾರಕ್ಕೆ ಬರಲು ಅವರದೇ ಸ್ವಂತ ಎಫರ್ಟ್ ಇದೆ. ಹಾಗಾಗಿ, ಸ್ವಾಭಾವಿಕವಾಗಿ ಎಲ್ಲರೂ ಕ್ಲೈಮ್ ಮಾಡುತ್ತಾರೆ. ಆದರೆ, ಅದರ ಶ್ರೇಯಸ್ಸನ್ನು ಕೆಲವೇ ಜನರು ತೆಗೆದುಕೊಳ್ಳುವುದನ್ನು ನಾವು ಒಪ್ಪುವುದಿಲ್ಲ ಎಂದು ಹೇಳಿದರು.
ನಾನೂ ಕೂಡ ಸಿಎಂ ಸ್ಥಾನದ ಆಕಾಂಕ್ಷಿ ಎಂಬ ಪರಮೇಶ್ವರ್ ಹೇಳಿಕೆಗೆ, ಅವರು ಮುಂಚೆ ಕೂಡ ಹೇಳಿದ್ದಾರೆ. ಅದರಲ್ಲಿ ಏನೂ ತಪ್ಪಿಲ್ಲ. ಹೇಳಿದ್ದು ಸರಿಯಾಗಿದೆ. ನಾವು ಕೂಡ ಆಕಾಂಕ್ಷಿ ಆಗಿದ್ದೇವೆ. ಕಾಂಗ್ರೆಸ್ ಪಕ್ಷಕ್ಕೆ ಎಸ್ಸಿ, ಎಸ್ಟಿ, ಅಲ್ಪಸಂಖ್ಯಾತ ಸಮುದಾಯದವರೇ ಮುಖ್ಯ ಮತದಾರರು. ಹಾಗಾಗಿ, ಆ ಸಮುದಾಯಗಳಿಗೆ ಪ್ರಾತಿನಿಧ್ಯ ಸಿಗಬೇಕಿದೆ ಎಂದರು.
ಇದನ್ನೂ ಓದಿ ; ಎರಡು ವರ್ಷದಲ್ಲಿ ಕೋಲಾರಕ್ಕೆ ಎತ್ತಿನಹೊಳೆ ನೀರು ಹರಿಯಲಿದೆ | ಸಿಎಂಗೆ, ಹೆಚ್‌ಡಿಕೆ ಮತ್ತೆ ಸವಾಲ್



















