ಬೆಂಗಳೂರು: ಕಾಂಗ್ರೆಸ್ ನಲ್ಲಿ ಸಿಎಂ ಫೈಟ್ ಜೋರಾಗಿದ್ದು, ಹಲವು ನಾಯಕರಂತೂ ಬಹಿರಂಗವಾಗಿಯೇ ನಾನು ಸಿಎಂ ರೇಸ್ ನಲ್ಲಿದ್ದೇನೆ ಎಂದು ಹೇಳುತ್ತಿದ್ದಾರೆ. ಈ ಮಧ್ಯೆ ಹೈಕಮಾಂಡ್ ಗೆ ಹಲವರು ಪತ್ರ ಬರೆದಿದ್ದಾರೆ. ಈಗ ಈ ಎಲ್ಲ ಗೊಂಲಗಳಿಗೆ ಸಿದ್ದರಾಮಯ್ಯ ಅಂತ್ಯ ಹಾಡಿದ್ದು, ನಾನೇ ಸಿಎಂ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ವಿಷಯದಲ್ಲಿ ಯಾರಿಗೂ ಯಾವ ಡೌಟು ಬೇಡ. ನಾನೇ ಸಿಎಂ ಆಗಿ ಮುಂದುವರೆಯುತ್ತೇನೆ. ಸಿಎಂ ಕುರ್ಚಿ ಖಾಲಿ ಇಲ್ಲ. ಯಾರೂ ಆ ರೀತಿ ನಾನೇ ಸಿಎಂ ಎಂದು ಹೇಳಿಲ್ಲ. ನಾನು ಆಕಾಂಕ್ಷಿ ಎಂದು ಹೇಳುವುದು, ಕುರ್ಚಿ ಖಾಲಿ ಇದ್ದಾಗ. ಈಗ ಕುರ್ಚಿಯಲ್ಲಿ ನಾನಿದ್ದೇನೆ. ಹೀಗಾಗಿ ನಾನೇ ಮುಂದುವರೆಯುತ್ತೇನೆ ಎಂದು ಹೇಳಿದ್ದಾರೆ.
ಹಿಂದಿನ ಸರ್ಕಾರದ 21ಕ್ಕೂ ಅಧಿಕ ಹಗರಣಗಳನ್ನು ಸದನದಲ್ಲಿ ಪ್ರಸ್ತಾಪ ಮಾಡಲಾಗಿದೆ. ಹಗರಣಗಳ ತನಿಖೆಗೆ ಸಂಬಂಧಿಸಿದಂತೆ ಮುಂದಿನ ರೂಪರೇಷೆ ಕುರಿತಂತೆ ಗೃಹ ಸಚಿವ ಪರಮೇಶ್ವರ್ ಅವರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ.
ಎಲ್ಲ ಪ್ರಕರಣಗಳಿಗೆ ತನಿಖಾ ಆಯೋಗ ರಚನೆ ಮಾಡಿಲ್ಲ. 40 ಪರ್ಸೆಂಟ್ ಕಮೀಷನ್, ಕೋವಿಡ್ ಹಾಗೂ ಬಿಟ್ ಕಾಯಿನ್ ಗೆ ತನಿಖಾ ಆಯೋಗ ರಚನೆ ಮಾಡಲಾಗಿದೆ. ಪ್ರಕರಣಗಳ ತನಿಖೆ ಮಾಡದೇ ಇದ್ದರೆ ಏಕೆ ಮಾಡಿಲ್ಲ ?ಎಂದು ಪರಿಶೀಲನೆ ಮಾಡಿ ಶಿಫಾರಸು ಮಾಡಲಿದೆ. ಏನು ಕ್ರಮ ಕೈಗೊಳ್ಳಬೇಕು ಎಂದು ಸೂಚನೆಯನ್ನು ಆ ಸಮಿತಿ ನೀಡುತ್ತದೆ. ಅದರ ನಿರ್ದೇಶನದಂತೆ ಮುಂದಿನ ಕ್ರಮ ಜರಗಿಸಲಾಗುವುದು ಎಂದು ಹೇಳಿದ್ದಾರೆ.
ನಾನು ದ್ವೇಷದ ರಾಜಕಾರಣ ಮಾಡಲ್ಲ. ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ. ಬಿಜೆಪಿ, ಜೆಡಿಎಸ್ ಗೆ ಸಿದ್ದರಾಮಯ್ಯ ರನ್ನು ಕಂಡರೆ ಭಯ. ಹೀಗಾಗಿ ಏನೇನೋ ಮಾಡುತ್ತಿದ್ದಾರೆ ಎಂದು ಗುಡುಗಿದ್ದಾರೆ.