ಬೆಂಗಳೂರು : ನಾನೂ ಕೂಡಾ ಸಚಿವ ಸ್ಥಾನ ಕೇಳಿದ್ದೇನೆ, ಕೇಳುವುದರಲ್ಲಿ ತಪ್ಪೇನಿದೆ, ನಾನೂ ಒಬ್ಬ ಪ್ರಬಲ ಆಕಾಂಕ್ಷಿ ನಾನು ಬಂಗಾರಪ್ಪ ಗರಡಿಯಲ್ಲಿ ಬೆಳೆದು ಬಂದವನು ಸಂಪುಟ ಪುನಾರಚನೆ ಚರ್ಚೆ ನಡೀತಿದೆ, ನಮಗೆ ಕೇಳುವ ಹಕ್ಕಿದೆ, ಕೊಟ್ಟರೆ ಖುಷಿ ಆಗುತ್ತೇವೆ, ಕೊಡದಿದ್ದಲ್ಲಿ ಭಿನ್ನಮತ ಮಾಡುವುದಿಲ್ಲ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.
ಬೆಂಗಳುರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೋಪಾಲಕೃಷ್ಣ, ಸಂಪುಟ ವಿಸ್ತರಣೆಗಿಂತ ಪುನಾರಚನೆ ಮಾಡಿದರೆ ಒಳ್ಳೆಯದು, ಒಂದಷ್ಟು ಜನರಿಗೆ ಅನುಕೂಲ ಆಗಲಿದೆ. ಸಿಎಂ ಸ್ಥಾನದ ಬಗ್ಗೆ ನಾವು ಚರ್ಚೆ ಮಾಡಲ್ಲ, ಅದು ಹೈಕಮಾಂಡ್‌ಗೆ ಬಿಟ್ಟಿದ್ದು ಯಾರು ಸಿಎಂ ಸ್ಥಾನದ ಬಗ್ಗೆ ಮಾತಾಡಿದ್ದಾರೋ ಅವರಿಗೆ ನೊಟೀಸ್ ಕೊಡಲಾಗಿದೆ. ಹಿಂದೆಲ್ಲ ಹೈಕಮಾಂಡ್ ಅವರೇ ತೀರ್ಮಾನ ಮಾಡುತ್ತಿದ್ದರು, ಒಮ್ಮತದಿಂದ ಆ ಕಾಲದಲ್ಲಿ ಸಿಎಂ ಆಯ್ಕೆ ಮಾಡಲಾಗಿದೆ. ವರಿಷ್ಠರು ಏನು ಹೇಳುತ್ತಾರೋ ಅದನ್ನು ಕೇಳುತ್ತೇವೆ ಎಂದಿದ್ದಾರೆ.
ಆರ್ ವಿ ದೇಶಪಾಂಡೆ ಹೇಳಿಕೆಯ ವಿಚಾರವಾಗಿ ಮಾತನಾಡಿ, ದೇಶಪಾಂಡೆ ಅವರು ಹಿರಿಯರು, ಯಾಕೆ ಹಾಗೆ ಹೇಳಿದರೋ ಗೊತ್ತಿಲ್ಲ, ಗ್ಯಾರಂಟಿಗಳಿಂದ ಬಹಳಷ್ಟು ಬಡವರ ಆರ್ಥಿಕ ಮಟ್ಟ ಸುಧಾರಿಸಿದೆ ಗ್ಯಾರಂಟಿಗಳಿಂದ ಯಾವುದೇ ಸಮಸ್ಯೆ ಆಗುತ್ತಿಲ್ಲ. ಐದೂ ಬೆರಳು ಒಂದೇ ಸಮ ಇರುವುದಿಲ್ಲ, ಕೆಲವರು ಗ್ಯಾರಂಟಿಗಳ ಬಗ್ಗೆ ನಮ್ಮವರೇ ಮಾತನಾಡುತ್ತಾರೆ. ದೇಶಪಾಂಡೆ ಅವರು ಶ್ರೀಮಂತರು ಇರಬಹುದು, ಆದರೆ ಬಡವರ ಬಗ್ಗೆಯೂ ಯೋಚನೆ ಮಾಡಿ ಎಂದು ಹೇಳಿದ್ದಾರೆ.
ಗ್ಯಾರಂಟಿಗಳಿಂದ ಸಮಸ್ಯೆ ಆಗುತ್ತಿದೆ ಎಂಬುವುದು ಶುದ್ದ ಸುಳ್ಳು, ಈ ರೀತಿ ಹೇಳಿಕೆ ಕೊಡುವವರು ಮೂರ್ಖರು ಅಂತಾನೇ ನಾನು ಹೇಳುತ್ತೇನೆ ದೇಶಪಾಂಡೆಗೆ ತಿರುಗೇಟು ನೀಡಿದ್ದಾರೆ..
ಇನ್ನೂ ಸಿಎಂ ಮೇಲೆ ಡಿಸಿಎಂ ಮುನಿಸು ಎಂಬ ಆರೋಪದ ಬಗ್ಗೆ ಮಾತನಾಡಿ, ಇಲ್ಲಿ ಯಾರು ಮುನಿಸಿಕೊಂಡಿಲ್ಲ, ಸಿಎಂ ಡಿಸಿಎಂ ಚೆನ್ನಾಗಿಯೇ ಇದ್ದಾರೆ. ಇಬ್ಬರು ಪಕ್ಷಕ್ಕಾಗಿ ದುಡಿದಿದ್ದಾರೆ. ಇದರ ಬಗ್ಗೆ ಮಾತನಾಡುವುದು ಬೇಡ. ಏನು ಮಾಡಬೇಕೆಂದು ಹೈಕಮಾಂಡ್ ನಿರ್ಧರಿಸ್ತಾರೆ, ಹೈಕಮಾಂಡ್ ನಿರ್ಧಾರವೇ ಅಂತಿಮ ನಿರ್ಧಾರ ಎಂದಿದ್ದಾರೆ.
ಇದೇ ವೇಳೆ RSS ಸಂಘದ ಚಟುವಟಿಕೆ ನಿರ್ಬಂಧ ಪ್ರಯತ್ನ ವಿಚಾರವಾಗಿ ಮಾತನಾಡಿ. ಮೂಲ ಆರ್‌ಎಸ್‌ಎಸ್ ನವರ ನಿಷ್ಠೆ ಸರಿಯಿದೆ, ಆದರೆ ಬಿಜೆಪಿಯವರು ಚಡ್ಡಿ ಹಾಕಿದ ಮೇಲೆ ಹಾಳಾಗಿದೆ. ಪ್ರಿಯಾಂಕ್ ಖರ್ಗೆ ಹೇಳಿದ್ದಲ್ಲಿ ತಪ್ಪಿಲ್ಲ. ಅವರು ಪರ್ಮಿಷನ್ ತಗೊಂಡು ಚಟುವಟಿಕೆಗಳನ್ನು ಮಾಡಲಿ. ಶಾಲೆ, ಕಾಲೇಜಿನಲ್ಲಿ ಸಭೆ ಮಾಡಿದರೆ ನಾಳೆ ಬೇರೆಯವರು ಕೇಳುತ್ತಾರೆ. ಇದಕ್ಕಾಗಿ ಬೆದರಿಕೆ ಎಲ್ಲ ಹಾಕುವುದೆಕ್ಕೆಲ್ಲ ಹೋಗಬಾರದು. ಬೆದರಿಕೆ ಹಾಕುತ್ತಾರೆ ಎಂದರೆ ಇವರೇನು ಭಯೋತ್ಪಾದಕರಾ? ಕೊತ್ವಾಲರಾ? ಅದೆಲ್ಲ ನಡೆಯಲ್ಲ, ಅವರ ಬೆದರಿಕೆಗಲ್ಲ ಬಗ್ಗಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.