ಬೆಂಗಳೂರು : ಭಾರತೀಯ ಕಾರು ಮಾರುಕಟ್ಟೆಯಲ್ಲಿ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಎಂದರೆ ತಕ್ಷಣ ನೆನಪಾಗುವ ಹೆಸರು ಹ್ಯುಂಡೈ i20. ಇದೀಗ ಹ್ಯುಂಡೈ ಮೋಟಾರ್ ಇಂಡಿಯಾ ತನ್ನ ಗ್ರಾಹಕರಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದು, ಈ ಐಷಾರಾಮಿ ಕಾರನ್ನು ಮತ್ತಷ್ಟು ಕೈಗೆಟಕುವ ದರದಲ್ಲಿ ನೀಡಲು ಮುಂದಾಗಿದೆ.
ಮಾರುತಿ ಸುಜುಕಿ ಬಲೆನೊ ಮತ್ತು ಟಾಟಾ ಆಲ್ಟ್ರೋಜ್‌ಗಳಂತಹ ಪ್ರತಿಸ್ಪರ್ಧಿಗಳಿಗೆ ಪ್ರಬಲ ಪೈಪೋಟಿ ನೀಡುವ ನಿಟ್ಟಿನಲ್ಲಿ ಹ್ಯುಂಡೈ ಮಹತ್ವದ ನಿರ್ಧಾರ ಕೈಗೊಂಡಿದ್ದು, i20 ಕಾರಿನ ಆರಂಭಿಕ ಬೆಲೆಯನ್ನು 5.99 ಲಕ್ಷ ರೂಪಾಯಿಗಳಿಗೆ (ಎಕ್ಸ್-ಶೋರೂಂ) ಇಳಿಕೆ ಮಾಡಿದೆ. ಈ ಬೆಲೆ ಪರಿಷ್ಕರಣೆಯ ಮೂಲಕ ಮಧ್ಯಮ ವರ್ಗದ ಗ್ರಾಹಕರನ್ನೂ ತನ್ನತ್ತ ಸೆಳೆಯುವುದು ಕಂಪನಿಯ ಉದ್ದೇಶವಾಗಿದೆ.
ಕಡಿಮೆ ಬೆಲೆಗೆ ಸಿಗುವ ‘ಎರಾ’ ವೇರಿಯೆಂಟ್‌ನಲ್ಲಿ ಸುರಕ್ಷತೆಗಿಲ್ಲ ಕೊರತೆ
ಬೆಲೆ ಕಡಿಮೆಯಾಗಿದೆ ಎಂದಾಕ್ಷಣ ವೈಶಿಷ್ಟ್ಯಗಳಲ್ಲಿ ಹ್ಯುಂಡೈ ಯಾವುದೇ ರಾಜಿ ಮಾಡಿಕೊಂಡಿಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ಅಂಶ. ಹೊಸದಾಗಿ ಪರಿಚಯಿಸಲಾದ ಎಂಟ್ರಿ ಲೆವೆಲ್ ‘ಎರಾ’ (Era) ವೇರಿಯೆಂಟ್, ಅತ್ಯುತ್ತಮ ಸುರಕ್ಷತಾ ಮಾನದಂಡಗಳನ್ನು ಹೊಂದಿದೆ. ಮೂಲ ಆವೃತ್ತಿಯಲ್ಲೇ ಕಂಪನಿಯು ಬರೋಬ್ಬರಿ ಆರು ಏರ್‌ಬ್ಯಾಗ್‌ಗಳನ್ನು ನೀಡುವ ಮೂಲಕ ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಿದೆ. ಇದರೊಂದಿಗೆ ಬಾಡಿ ಕಲರ್ ಡೋರ್ ಹ್ಯಾಂಡಲ್ಸ್, ಸ್ಕಿಡ್ ಪ್ಲೇಟ್ಸ್, ಡಿಜಿಟಲ್ ಇನ್ಸ್‌ಟ್ರುಮೆಂಟ್ ಕ್ಲಸ್ಟರ್ ಮತ್ತು ಟೈಪ್-ಸಿ ಯುಎಸ್‌ಬಿ ಚಾರ್ಜರ್‌ಗಳು ಲಭ್ಯವಿವೆ. ಕಡಿಮೆ ಬೆಲೆಯಲ್ಲಿ ಪ್ರೀಮಿಯಂ ಅನುಭವ ಮತ್ತು ಗರಿಷ್ಠ ಸುರಕ್ಷತೆಯನ್ನು ಒದಗಿಸುವುದು ಈ ಹೊಸ ವೇರಿಯೆಂಟ್‌ನ ಪ್ರಮುಖ ಉದ್ದೇಶವಾಗಿದೆ.
ಮ್ಯಾಗ್ನಾ ಮತ್ತು ಮ್ಯಾಗ್ನಾ ಎಕ್ಸಿಕ್ಯೂಟಿವ್ : ಮೌಲ್ಯಯುತ ಆಯ್ಕೆಗಳು
ಇನ್ನು ಮಧ್ಯಮ ಶ್ರೇಣಿಯ ವೇರಿಯೆಂಟ್‌ಗಳಾದ ಮ್ಯಾಗ್ನಾ ಎಕ್ಸಿಕ್ಯೂಟಿವ್ ಮತ್ತು ಮ್ಯಾಗ್ನಾ ಮಾದರಿಗಳ ಬೆಲೆಯನ್ನೂ ಪರಿಷ್ಕರಿಸಲಾಗಿದ್ದು, ಇವು ಕ್ರಮವಾಗಿ 6.74 ಲಕ್ಷ ಮತ್ತು 6.99 ಲಕ್ಷ ರೂಪಾಯಿಗಳಿಗೆ ಲಭ್ಯವಿವೆ. ಮ್ಯಾಗ್ನಾ ಎಕ್ಸಿಕ್ಯೂಟಿವ್ ಆವೃತ್ತಿಯು ಕೀಲೆಸ್ ಎಂಟ್ರಿ, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ಸ್ ಮತ್ತು ಎಲೆಕ್ಟ್ರಿಕಲ್ ಅಡ್ಜಸ್ಟಬಲ್ ಮಿರರ್‌ಗಳಂತಹ ತಾಂತ್ರಿಕ ಸೌಲಭ್ಯಗಳನ್ನು ಒಳಗೊಂಡಿದೆ. ಇನ್ನು ಸ್ವಲ್ಪ ಹೆಚ್ಚು ಹಣ ಹೂಡಿಕೆ ಮಾಡುವವರಿಗೆ ಮ್ಯಾಗ್ನಾ ವೇರಿಯೆಂಟ್ ಎಲೆಕ್ಟ್ರಿಕ್ ಸನ್‌ರೂಫ್, ಎಲ್‌ಇಡಿ ಡಿಆರ್‌ಎಲ್‌ಗಳು ಮತ್ತು ರಿಯರ್ ಎಸಿ ವೆಂಟ್‌ಗಳಂತಹ ಐಷಾರಾಮಿ ಸೌಲಭ್ಯಗಳನ್ನು ಒದಗಿಸುತ್ತದೆ.
ವಿಶೇಷ ಆಫರ್ ಮತ್ತು ಎಂಜಿನ್ ಸಾಮರ್ಥ್ಯ
ತಂತ್ರಜ್ಞಾನ ಪ್ರಿಯರಿಗಾಗಿ ಹ್ಯುಂಡೈ ಒಂದು ವಿಶೇಷ ಆಯ್ಕೆಯನ್ನು ಮುಂದಿಟ್ಟಿದೆ. ಕೇವಲ 14,999 ರೂಪಾಯಿಗಳ ಹೆಚ್ಚುವರಿ ಪಾವತಿಯೊಂದಿಗೆ, ಗ್ರಾಹಕರು ಡೀಲರ್ ಮಟ್ಟದಲ್ಲಿ 10.1 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಅಳವಡಿಸಿಕೊಳ್ಳಬಹುದು. ಇದು ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಜೊತೆಗೆ ರಿಯರ್ ಕ್ಯಾಮೆರಾವನ್ನು ಒಳಗೊಂಡಿರುತ್ತದೆ ಹಾಗೂ ಇದಕ್ಕೆ ಮೂರು ವರ್ಷಗಳ ವಾರಂಟಿ ಕೂಡ ಸಿಗಲಿದೆ.
ಯಾಂತ್ರಿಕವಾಗಿ i20 ಕಾರು ಬಲಿಷ್ಠವಾಗಿದ್ದು, ಇದು 1.2 ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹೊಂದಿದೆ. ಇದು 83 ಬಿಹೆಚ್‌ಪಿ ಪವರ್ ಮತ್ತು 114.7 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್ ಅಥವಾ ಸಿವಿಟಿ ಗೇರ್‌ಬಾಕ್ಸ್ ಆಯ್ಕೆಯಲ್ಲಿ ಲಭ್ಯವಿದೆ. ಕಳೆದ 15 ವರ್ಷಗಳಲ್ಲಿ ಸುಮಾರು 15 ಲಕ್ಷಕ್ಕೂ ಹೆಚ್ಚು i20 ಕಾರುಗಳನ್ನು ಮಾರಾಟ ಮಾಡಿರುವ ಹ್ಯುಂಡೈ, ಈ ಹೊಸ ಬೆಲೆ ಬದಲಾವಣೆಯ ಮೂಲಕ ತನ್ನ ಮಾರುಕಟ್ಟೆ ಪಾಲನ್ನು ಹೆಚ್ಚಿಸಿಕೊಳ್ಳುವ ವಿಶ್ವಾಸದಲ್ಲಿದೆ.
ಇದನ್ನೂ ಓದಿ : ಇಸ್ಲಾಮಾಬಾದ್‌ನ ದರ್ಗಾದಲ್ಲಿ ಆತ್ಮಾಹುತಿ ಬಾಂಬ್ ದಾಳಿ | 31 ಮಂದಿ ಬಲಿ, ತುರ್ತು ಪರಿಸ್ಥಿತಿ ಘೋಷಣೆ!



















