ಐಪಿಎಲ್ 2025 ರ 27ನೇ ಪಂದ್ಯ ಹೊಡಿ ಬಡಿ ಆಟಕ್ಕೆ ಸಾಕ್ಷಿಯಾಯಿತು. ಪಂಜಾಬ್ ಹಾಗೂ ಹೈದರಾಬಾದ್ ಮಧ್ಯೆ ನಡೆದ ಪಂದ್ಯದಲ್ಲಿ ರನ್ ಗಳ ಸುರಿಮಳೆಯಾಯಿತು. ಕೊನೆಗೂ ಹೈದರಾಬಾದ್ ಗೆದ್ದು ಬೀಗಿತು.
ಅಭಿಷೇಕ್ ಶರ್ಮಾ ಹಾಗೂ ಟ್ರಾವಿಸ್ ಹೆಡ್ ಭರ್ಜರಿ ಆಟದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಬೌಂಡರಿ, ಸಿಕ್ಸರ್ ಗಳ ಸುರಿಮಳೆಗೈದಿವೆ. ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ 20 ಓವರ್ಗಳಲ್ಲಿ ಬರೋಬ್ಬರಿ 245 ರನ್ ಗಳಿಸಿತ್ತು.
246 ರನ್ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿರುವ ಹೈದರಾಬಾದ್ ತಂಡದ ಪರ ಯುವ ಆರಂಭಿಕ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ ಕೇವಲ 40 ಎಸೆತಗಳಲ್ಲಿ ಶತಕ ಗಳಿಸಿದರು. ಆರಂಭದಿಂದಲೂ ಪಂಜಾಬ್ ಬೌಲರ್ಗಳ ಹೆಡೆಮುರಿ ಕಟ್ಟಿದ ಅಭಿಷೇಕ್ ಸ್ಫೋಟಕ ಶತಕ ಸಿಡಿಸಿ ಮಿಂಚಿದ್ದಾರೆ.
40 ಎಸೆತಗಳಲ್ಲಿ ಶತಕ ಪೂರ್ಣಗೊಳಿಸಿದ ಅಭಿಷೇಕ್ ಅವರ ಇನ್ನಿಂಗ್ಸ್‌ನಲ್ಲಿ 11 ಬೌಂಡರಿ ಮತ್ತು 6 ಸಿಕ್ಸರ್‌ಗಳನ್ನು ಸಿಡಿಸಿದರು. 250ರ ಸ್ಟ್ರೈಕ್ ರೇಟ್ನಲ್ಲಿ ಶತಕ ಬಾರಿಸಿ ಗೆಲುವಿನ ನಗೆ ಬೀರಿದರು. ಇದು ಐಪಿಎಲ್‌ನಲ್ಲಿ ಭಾರತೀಯ ಬ್ಯಾಟರ್ ಒಬ್ಬ ದಾಖಲಿಸಿದ ಅತಿ ವೇಗದ ಮೂರನೇ ಶತಕ ಎಂಬ ದಾಖಲೆಯನ್ನು ಸೃಷ್ಟಿಸಿತು.
ಇದು ಮಾತ್ರವಲ್ಲದೆ ಅಭಿಷೇಕ್ ಶರ್ಮಾ ಹಾಗೂ ಟ್ರಾವಿಸ್ ಹೆಡ್ ಮೊದಲ ವಿಕೆಟ್ಗೆ ಬರೋಬ್ಬರಿ 171 ರನ್ಗಳ ಜೊತೆಯಾಟ ನೀಡಿ ಅಭಿಮಾನಿಗಳನ್ನು ರಂಜಿಸಿದರು. ಕೇವಲ 74 ಎಸೆತಗಳಲ್ಲಿ 171 ರನ್ ಚಚ್ಚಿದ ಈ ಜೋಡಿ ಈ ಸೀಸನ್‌ನಲ್ಲಿ ಅತಿದೊಡ್ಡ ಜೊತೆಯಾಟದ ಕಾಣಿಕೆ ನೀಡಿತು.
ಕೇವಲ 55 ಎಸೆತಗಳನ್ನು ಎದುರಿಸಿದ ಅಭಿಷೇಕ್ ಶರ್ಮಾ ಬರೋಬ್ಬರಿ 14 ಬೌಂಡರಿ ಹಾಗೂ 10 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 141 ರನ್ ಗಳಿಸಿದರು.