ಹೈದರಾಬಾದ್: ಬೋನಾಲು ಹಬ್ಬದ ಪ್ರಯುಕ್ತ ತಯಾರಿಸಿ, ಫ್ರಿಡ್ಜ್ ನಲ್ಲಿ ಇರಿಸಿದ್ದ (ಶೈತ್ಯೀಕರಣಗೊಳಿಸಿದ್ದ) ಮಾಂಸಾಹಾರವನ್ನು ಸೇವಿಸಿದ ಬಳಿಕ, ಅದು ವಿಷಾಹಾರವಾಗಿ (food poisoning) ಪರಿಣಮಿಸಿದ್ದು, ಓರ್ವ ವ್ಯಕ್ತಿ ಮೃತಪಟ್ಟು, ಕುಟುಂಬದ ಮೂವರು ಸದಸ್ಯರು ಗಂಭೀರ ಸ್ಥಿತಿಯಲ್ಲಿರುವ ಘಟನೆ ಹೈದರಾಬಾದ್‌ನ ವನಸ್ಥಲಿಪುರಂನಲ್ಲಿ ನಡೆದಿದೆ.
ಫಲಕ್‌ನುಮಾ ರಸ್ತೆ ಸಾರಿಗೆ ನಿಗಮದ ಕಂಡಕ್ಟರ್ ಆಗಿದ್ದ 46 ವರ್ಷದ ಶ್ರೀನಿವಾಸ್ ಯಾದವ್ ಅವರು ಭಾನುವಾರ ಬೋನಾಲು ಹಬ್ಬಕ್ಕಾಗಿ ತಮ್ಮ ಕುಟುಂಬ ಮತ್ತು ಸಂಬಂಧಿಕರಿಗಾಗಿ ಚಿಕನ್, ಮಟನ್ ಮತ್ತು ಬೋಟಿ (ಮೇಕೆ ಕರುಳು) ಖಾದ್ಯಗಳನ್ನು ತಯಾರಿಸಿದ್ದರು. ಒಂಬತ್ತು ಜನರಿದ್ದ ಕುಟುಂಬವು ಸೋಮವಾರ ಫ್ರಿಜ್‌ನಲ್ಲಿದ್ದ ಉಳಿದ ಮಾಂಸವನ್ನು ಮತ್ತೆ ಬಿಸಿಮಾಡಿ ಸೇವಿಸಿದೆ.
ಆಹಾರ ಸೇವಿಸಿದ ಕೆಲವೇ ಹೊತ್ತಿನಲ್ಲಿ ಕುಟುಂಬದ ಹಲವು ಸದಸ್ಯರಿಗೆ ವಾಂತಿ ಮತ್ತು ಭೇದಿ ಕಾಣಿಸಿಕೊಂಡಿದೆ. ತಕ್ಷಣವೇ ಎಲ್ಲ ಒಂಬತ್ತು ಮಂದಿಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶ್ರೀನಿವಾಸ್ ಯಾದವ್ ಮಂಗಳವಾರ ಮೃತಪಟ್ಟಿದ್ದಾರೆ. ವೈದ್ಯರ ಪ್ರಕಾರ, ಇನ್ನೂ ಮೂವರ ಸ್ಥಿತಿ ಚಿಂತಾಜನಕವಾಗಿದ್ದು, ಉಳಿದವರು ನಿಗಾದಲ್ಲಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆ
ವನಸ್ಥಲಿಪುರಂ ಪೊಲೀಸರ ಪ್ರಕಾರ, “ಪ್ರಾಥಮಿಕ ತನಿಖೆಯಲ್ಲಿ ವಿಷಾಹಾರವೇ ಸಾವಿಗೆ ಕಾರಣವೆಂದು ಶಂಕಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯಲಾಗುತ್ತಿದೆ. ಕುಟುಂಬದವರು ಶೇಖರಿಸಿಟ್ಟಿದ್ದ ಆಹಾರವನ್ನು ಮತ್ತೆ ಬಿಸಿ ಮಾಡಿ ಸೇವಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ” ಎಂದಿದ್ದಾರೆ.
ಈ ಘಟನೆಯ ಹಿನ್ನೆಲೆಯಲ್ಲಿ, ಆರೋಗ್ಯ ಇಲಾಖೆಯ ಅಧಿಕಾರಿಗಳು ಬಿಸಿ ವಾತಾವರಣದಲ್ಲಿ ಶೇಖರಿಸಿಟ್ಟ ಮಾಂಸ ಮತ್ತು ಇತರ ಬೇಗ ಹಾಳಾಗುವ ಆಹಾರ ಪದಾರ್ಥಗಳನ್ನು ಸೇವಿಸುವಾಗ ಸಾರ್ವಜನಿಕರು ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.