ಹೈದರಾಬಾದ್: ಓಲಾ, ಉಬರ್ ಮತ್ತು ರಾಪಿಡೋ ಸಂಸ್ಥೆಗಳ ನ್ಯಾಯಯುತವಲ್ಲದ ದರಗಳ ವಿರುದ್ಧ ಹೋರಾಟ ನಡೆಸುತ್ತಿರುವ ಹೈದರಾಬಾದ್ ಕ್ಯಾಬ್ ಚಾಲಕರು ಸೋಮವಾರದಿಂದ ವಿನೂತನ ರೀತಿಯಲ್ಲಿ ಪ್ರತಿಭಟನೆಗೆ(Protest) ನಿರ್ಧರಿಸಿದ್ದಾರೆ. ವಿಮಾನ ನಿಲ್ದಾಣಗಳ ಸಂಚಾರವನ್ನು ಬಹಿಷ್ಕರಿಸುವ ಮೂಲಕ ಪ್ರತಿಭಟನೆ ದಾಖಲಿಸಿದ್ದ ಕ್ಯಾಬ್ ಡ್ರೈವರ್ ಗಳು, ಮಾರ್ಚ್ 24ರಿಂದ “ನೋ ಎಸಿ ಅಭಿಯಾನ”ವನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ. ಅಂದರೆ, ಕ್ಯಾಬ್ ಹತ್ತುವ ಪ್ರಯಾಣಿಕರಿಗೆ ಹವಾನಿಯಂತ್ರಿತ(ಎಸಿ) ಸೌಲಭ್ಯಗಳನ್ನು ನಿರಾಕರಿಸಲು ನಿರ್ಧರಿಸಿದ್ದಾರೆ.
ತೆಲಂಗಾಣ ಗಿಗ್ ಮತ್ತು ಪ್ಲಾಟ್ ಫಾರ್ಮ್ ವರ್ಕರ್ಸ್ ಯೂನಿಯನ್ (ಟಿಜಿಪಿಡಬ್ಲ್ಯುಯು) ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ನೀಡಿದ್ದು, “ಹೈದರಾಬಾದ್ ಕ್ಯಾಬ್ ಚಾಲಕರು ಮಾರ್ಚ್ 24 ರಿಂದ ‘ನೋ ಎಸಿ ಕ್ಯಾಂಪೇನ್’ ಪ್ರಾರಂಭಿಸಲಿದ್ದಾರೆ ಎಂದು ಘೋಷಿಸಿದೆ.
ಓಲಾ, ಉಬರ್ ಮತ್ತು ರಾಪಿಡೋದಂತಹ ಕ್ಯಾಬ್ ಅಗ್ರಿಗೇಟರ್ಗಳು ಸರ್ಕಾರ ನಿಗದಿಪಡಿಸಿದ ಪ್ರಿಪೇಯ್ಡ್ ಟ್ಯಾಕ್ಸಿ ದರಗಳಂತೆಯೇ ಏಕರೂಪದ ಶುಲ್ಕ ರಚನೆಯನ್ನು ಅಳವಡಿಸಿಕೊಳ್ಳಬೇಕು ಎನ್ನುವುದು ಇವರ ಬೇಡಿಕೆಯಾಗಿದೆ. ಹಾಗೆ ಮಾಡಿದರೆ ಇಂಧನ ವೆಚ್ಚಗಳು, ನಿರ್ವಹಣಾ ವೆಚ್ಚಗಳು ಮತ್ತು ಚಾಲಕರ ಸೇವೆಗಳಿಗೆ ನ್ಯಾಯಯುತ ಪರಿಹಾರ ಒದಗಿಸಲು ಸಾಧ್ಯ ಎನ್ನುವುದು ಇವರ ವಾದ.
ಇದಕ್ಕೂ ಮೊದಲು ಏಪ್ರಿಲ್ 2024 ರಲ್ಲೂ, ಒಕ್ಕೂಟವು ‘ನೋ ಎಸಿ ಅಭಿಯಾನ’ ನಡೆಸಿತ್ತು. ಪ್ರತಿ ಕಿ.ಮೀ.ಗೆ ಚಾಲಕನು ಕೇವಲ 10-12 ರೂ.ಗಳನ್ನು ಗಳಿಸುತ್ತಾನೆ. ಆದರೆ, ಏರ್ ಕಂಡೀಷನ್ ಹಾಕಿಕೊಂಡು ಕ್ಯಾಬ್ ಚಲಾಯಿಸಿದರೆ ಪ್ರತಿ ಕಿ.ಮೀ.ಗೆ 16-18 ರೂ.ವೆಚ್ಚವಾಗುತ್ತದೆ ಎಂದು ಒಕ್ಕೂಟ ತಿಳಿಸಿತ್ತು.
ಒಕ್ಕೂಟದ ಅಧ್ಯಕ್ಷ ಶೇಖ್ ಸಲಾಹುದ್ದೀನ್ ಮಾತನಾಡಿ, ಓಲಾ, ಉಬರ್ ಮತ್ತು ರಾಪಿಡೋದಂತಹ ಕ್ಯಾಬ್ ಅಗ್ರಿಗೇಟರ್ ಗಳು ನ್ಯಾಯಯುತವಲ್ಲದ ಬೆಲೆ ನಿಗದಿ ಮಾಡುವ ಮೂಲಕ ಅನ್ಯಾಯ ಮಾಡುತ್ತಿದೆ. ಅದರ ವಿರುದ್ಧ ನಾವು ‘ನೋ ಎಸಿ ಅಭಿಯಾನ’ ಸೇರಿದಂತೆ ವಿವಿಧ ರೀತಿಯಲ್ಲಿ ಪ್ರತಿಭಟನೆ ಆರಂಭಿಸಿದ್ದೇವೆ ಎಂದಿದ್ದಾರೆ. ಕ್ಯಾಬ್ ಅಗ್ರಿಗೇಟರ್ಗಳು ಮತ್ತು ಪ್ರಿಪೇಯ್ಡ್ ಟ್ಯಾಕ್ಸಿಗಳು ವಿಧಿಸುವ ದರಗಳಲ್ಲಿ ಗಮನಾರ್ಹ ಅಸಮಾನತೆ ಇದೆ. ಸುಮಾರು 300-400 ರೂ.ಗಳ ವ್ಯತ್ಯಾಸವಿದೆ ಎಂದು ಅವರು ಆರೋಪಿಸಿದ್ದಾರೆ.